ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರದ ಸನಿಹಕ್ಕೆ, 23 ಮಂದಿ ಬಲಿ

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ರುದ್ರತಾಂಡವ ಮುಂದುವರೆದಿದ್ದು, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮತ್ತೆ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರಂತೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 980ಕ್ಕೆ ಏರಿಕೆಯಾಗಿದೆ. 

ದೇಶದ ವಿವಿಧ ರಾಜ್ಯಗಳಲ್ಲಿ ಶನಿವಾರ ಒಂದೇ ದಿನದಲ್ಲಿ 180 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ವೈರಸ್’ಗೆ ದೇಶದಲ್ಲಿ ಒಟ್ಟು 23 ಮಂದಿ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಬಿಹಾರ, ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಕೇರಳ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಈ ವರೆಗೂ ವೈರಸ್ ನಿಂದ ಸಾವುಗಳು ಸಂಭವಿಸಿದೆ. 

ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಇಡೀ ದೇಶವನ್ನು ಕೇವಲ ಲಾಕ್ ಡೌನ್ ಮಾಡುವುದಷ್ಟೇ ಸಾಕಾಗುವುದಿಲ್ಲ, ಮತ್ತಷ್ಟು ಕ್ರಮಗಳ ಅಗತ್ಯವಿದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧ್ಯಯನಗಳು ಸಲಹೆ ನೀಡಿದೆ. 

ವೈರಸ್ ನ್ನು ಮಟ್ಟಹಾಕಬೇಕಾದರೆ, ದೇಶವನ್ನು 21 ದಿನ, 28 ದಿನ ಮತ್ತು 18 ದಿನಗಳೆಂದು ಸಂಪೂರ್ಣವಾಗಿ ಲಾಕ್ ಡೌನ್ ಮಾಡಬೇಕು. ಈ ಮಧ್ಯೆ ಐದು ದಿನಗಳ ವಿರಾಮಗಳನ್ನು ನೀಡಿದರೆ, ವೈರಸ್ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದೆ. 

ಯುರೋಪ್ ನಲ್ಲಿ ಕೊರೋನಾ ವ್ಯಾಪಕವಾಗಿ ಹರಡಿದ್ದು, ಈ ವರೆಗೂ 20,059 ಮಂದಿಯನ್ನು ಬಲಿ ಪಡೆದುಕೊಂಡಿದೆ. ಅಲ್ಲದೆ, ಸೋಂಕಿತರ ಸಂಖ್ಯೆ 337,632ಕ್ಕೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!