ಗಲ್ಫ್ ರಾಷ್ಟ್ರಗಳಲ್ಲಿನ ಭಾರತೀಯರನ್ನು ಕರೆತರಲು ನೌಕಾ ಪಡೆ, ವಾಯುಪಡೆ ಸಜ್ಜು
ನವದೆಹಲಿ: ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ನೌಕಾ ಪಡೆ, ವಾಯುಪಡೆ ಸಜ್ಜುಗೊಂಡಿದೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ಸಾಧ್ಯವಾಗದೇ ಹಲವು ಮಂದಿ ಗಲ್ಫ್ ರಾಷ್ಟ್ರಗಳಲ್ಲೇ ಸಿಲುಕಿಕೊಂಡಿದ್ದಾರೆ.
ಮೇ.03 ವರೆಗೆ ಲಾಕ್ ಡೌನ್ ಘೋಷಣೆ ಮಾಡಿರುವ ಭಾರತ ಸರ್ಕಾರ ದೇಶದ ಒಳಗೆ ಹಾಗೂ ವಿದೇಶಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಈ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ರಕ್ಷಣಾ ಪಡೆಗಳ ಮುಖ್ಯಸ್ಥ, ಸೇನೆ, ವಾಯುಪಡೆ, ನೌಕಾಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಸೂಚನೆ ನೀಡಲಾಗಿದೆ.
ನೌಕಾಪಡೆ ಹಾಗೂ ವಾಯುಪಡೆ ಅಧಿಕಾರಿಗಳಿಗೆ ಅಗತ್ಯವಿರುವ ಉಪಕರಣಗಳೊಂದಿಗೆ ಸಿದ್ಧವಾಗಿರುವುದಕ್ಕೆ ಸೂಚನೆ ನೀಡಲಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಹಿತಿ ನೀಡಿದ್ದು, ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯ ಅಧಿಕಾರಿಗಳಿಗೆ, ವಾಪಸ್ಸಾಗಲು ಬಯಸುತ್ತಿರುವ ಅಲ್ಲಿನ ಭಾರತೀಯರ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಸ್ವದೇಶಕ್ಕೆ ಮರಳಲು ಬಯಸುತ್ತಿರುವ ಭಾರತೀಯರು ಒಂದೇ ಕುಟುಂಬದವರಾಗಿದ್ದರೂ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ವ್ಯವಸ್ಥೆ ಪೂರ್ಣಗೊಂಡ ಬಳಿಕ ಅಧಿಕೃತ ಪ್ರಕಟಣೆ ನೀಡಲಾಗುವುದು ಎಂದು ಕತಾರ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
BEST OF LUCK