ಪರ್ಕಳ:ನಾರಾಯಣಗುರು ಜಯಂತಿ
ಪರ್ಕಳ- ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ವತಿಯಿಂದ ನಾರಾಯಣ ಗುರುಗಳ 165 ನೇ ಜನ್ಮ ದಿನಾಚರಣೆಯು ವಿಜೃಂಬಣೆಯಿಂದ ಸೆ. 13 ರಂದು ಜರಗಿತು. ಆ ಪ್ರಯುಕ್ತ ಬೆಳಿಗ್ಗೆ ಗುರುಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಧ್ಯಾಹ್ನ ವಿಶೇಷ ಮಹಾಪೂಜೆ, ಭಜನೆ ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭ ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಧಾರ್ಮಿಕ ಸಮಾಜಿಕ ಸಮಾನತೆಯ ಸ್ವಾತಂತ್ರ್ಯ ನಮ್ಮ ಹಕ್ಕು ಎಂದು ಬಿಂಬಿಸಿ ಜಾಗೃತಿಯನ್ನು ಮೂಡಿಸಿ, ಮನುಷ್ಯ ಮಾನವೀಯತೆ ಹೊಂದಿರಬೇಕೆಂಬ ಮೇಲ್ಪಂಕ್ತಿ ಹಾಕಿದ ನಾರಾಯಣ ಗುರುಗಳ ಆರಾಧನೆ, ಸಂದೇಶಗಳು ಅಳವಡಿಕೆಯಾಗಬೇಕೆಂಬ ಉದ್ದೇಶ ಗುರು ಜಯಂತಿ ಆಚರಣೆಯಲ್ಲಿದೆ. ಅದು ನಾರಾಯಣ ಗುರುಗಳ ಆಶೀರ್ವಾದದೊಂದಿಗೆ ಪ್ರತಿಷ್ಠಾಪಿತ ಶ್ರೀ ಕ್ಷೇತ್ರದಲ್ಲಿ ಸಾರ್ಥಕ್ಯವನ್ನು ಪಡೆಯಲಿದೆ ಎಂದರು.
ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಎಂ. ನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಅಡ್ವೆ ರವೀಂದ್ರ ಪೂಜಾರಿ ಗುರುಗಳ ತತ್ವ ಆದರ್ಶದ ಬಗ್ಗೆ ಮಾತನಾಡಿ ಈಗಿನ ಯುವ ಪೀಳಿಗೆ ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ಕರೆ ಕೊಟ್ಟರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಯು. ಶ್ರೀಧರ, ಸ್ಥಾಪಕ ಅಧ್ಯಕ್ಷರು, ಸದಾನಂದ ಪರ್ಕಳ, ಪ್ರ. ಕಾರ್ಯದರ್ಶಿ, ರಾಜೇಶ ಎಂ. ಅಮೀನ್, ಮಹಿಳಾ ಘಟಕದ ಅಧ್ಯಕ್ಷೆ ದೇವಕೀ ಕೋಟ್ಯಾನ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಎನ್ ಎಂ. ಪೂಜಾರಿ ಹಾಗೂ ರಮೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ರಾಜೇಶ ಅಮೀನ್ ವಂದನಾರ್ಪಣೆ ಗೈದರು. ಬಳಿಕ ಸಮಾಜದ ಮಹಿಳೆಯರಿಂದ, ವಿದ್ಯಾರ್ಥಿಗಳಿಂದ ಅಲ್ಲದೆ ಕ್ರೇಜೀ ಗೈಸ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.