ತ್ಯಾಜ್ಯ ಸಂಸ್ಕರಣ ,ಕಸದಿಂದ ರಸ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶಾಸಕ ನಾಯ್ಕ್ ಭೇಟಿ

ಬಂಟ್ವಾಳ : ಪ್ರಸ್ತುತ ರಾಜಕೀಯ ಗೊಂದಲದ ನಡುವೆಯು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬುಧವಾರ   ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ರಾಜನುಕುಂಟೆ ಗ್ರಾಮ ಪಂಚಾಯತ್ ನ ತ್ಯಾಜ್ಯ ಸಂಸ್ಕರಣ ಮತ್ತು ಕಸದಿಂದ ರಸ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿದರು‌.

ಬಂಟ್ವಾಳ ಪುರಸಭೆಯ ಗಂಭೀರ ಸಮಸ್ಯೆಯಲ್ಲೊಂದಾದ ಘನ ತ್ಯಾಜ್ಯ ವಿಲೇವಾರಿಗೊಂದು ಅಂತಿಮ ಪರಿಹಾರ ಕಂಡುಕೊಳ್ಳುವ ದೆಸೆಯಲ್ಲಿ ಶಾಸಕರು ರಾಜನುಕುಂಟೆ ಗ್ರಾಮ ಪಂಚಾಯತ್ ಅನುಷ್ಠಾನಕ್ಕೆ ತಂದಿರುವ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ  ಅಲ್ಲಿನ ಪಂಚಾಯತ್ ಸದಸ್ಯರಿಂದ  ಮಾಹಿತಿ ಪಡೆದುಕೊಂಡರು. ರಾಜನುಕುಂಟೆ ಗ್ರಾಮ ಪಂಚಾಯತ್ ಸದಸ್ಯರ ಸೃಜನಾತ್ಮಕ ಚಟುವಟಿಕೆಯಲ್ಲಿ ಅನುಷ್ಠಾನಕ್ಕೆ ಬಂದಿರುವ ಕಸದಿಂದ ರಸ ತ್ಯಾಜ್ಯ ನಿರ್ವಹಣಾ ಘಟಕದಿಂದಾಗಬಹುದಾದ ಸಾಧಕ,ಬಾಧಕಗಳ ಬಗ್ಗೆಯು ಅಲ್ಲಿನ ಪಂಚಾಯತ್ ಸದಸ್ಯರಿಂದ ವಿವರಣೆ ಪಡೆದುಕೊಂಡರು.

ತ್ಯಾಜ್ಯ ನಿರ್ವಹಣೆ ಮತ್ತು ಕಸದಿಂದ ರಸ ತೆಗೆಯವಂತ ಪಂಚಾಯತ್ ನ ಈ ವ್ಯವಸ್ಥೆಯನ್ನು ಶಾಸಕ ರಾಜೇಶ್ ನಾಯ್ಕ್ ಶ್ಲಾಘಿಸಿದರಲ್ಲದೆ ಬಂಟ್ವಾಳ ಪುರಸಭೆಯಲ್ಲು ಈ ಮಾದರಿಯ ತ್ಯಾಜ್ಯ ಸಂಸ್ಕರಣ ಮತ್ತು ಕಸದಿಂದ ರಸ ನಿರ್ವಹಣಾ ಘಟಕ ಕಾರ್ಯರೂಪಕ್ಕೆ ತರಲು ಚಿಂತಿಸಲಾಗುವುದು ಎಂದು ತಿಳಿಸಿದ್ದಾರೆ  ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಸ,ತ್ಯಾಜ್ಯ ವಸ್ತುಗಳನ್ನು ರಸ್ತೆಯ ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ಕೂಡ ಅಸಮರ್ಪಕವಾಗಿದೆ. ಘನತ್ಯಾಜ್ಯ ವಿಲೇವಾರಿ ಸಂಬಂಧಿಸಿ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆಗಳು ಮಾತ್ರ ನಡೆಯುತ್ತಿತ್ತು ಹೊರತು ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗಿಲ್ಲ.

ಸಂಸ್ಕರಣ ಘಟಕ ಕಾಮಗಾರಿ ನೆನೆಗುದಿಗೆ:

ಸಜೀಪನಡು ಗ್ರಾಮದ   ಕಂಚಿನಡ್ಕಪದವು ಎಂಬಲ್ಲಿ ಆರ್ಧಕ್ಕೆ ನಿಂತಿರುವ ತ್ಯಾಜ್ಯ ಸಂಸ್ಕರಣ ಘಟಕದ ಮುಂದುವರಿದ ಕಾಮಗಾರಿ  ನೆನೆಗುದಿಗೆ ಬಿದ್ದಿದ್ದು,ಸದ್ಯ ಅದರ ಕಾಮಗಾರಿ ಮತ್ತೆ ಆರಂಭವಾಗುದಾಗಲಿ, ಇನ್ನು ಮುಂದೆ  ಪುರಸಭೆಯ ತ್ಯಾಜ್ಯ ಈ ಘಟಕಕ್ಕೆ ಡಂಪ್ ಅಗುವುದಾಗಲೀ ಕನಸಿನ ಮಾತೆ ! ಸ್ಥಳೀಯ ಗ್ರಾಪಂ ನ ವಿರೋಧದ ಹಿನ್ನಲೆಯಲ್ಲಿ ಪುರಸಭೆಗೆ ಈ ಘಟಕದ ಪಕ್ಕಕ್ಕು ಸುಳಿಯಲು ಸಾಧ್ಯವಾಗದಿದ್ದು,ಈಗಾಗಲೇ ಕೋಟ್ಯಾಂತರ ರೂಪಾಯಿ ಈ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವ್ಯಯಮಾಡಿರುವುದೇ ವ್ಯರ್ಥವಾಗುವ ಅನುಮಾನವನ್ನು ಪುರವಾಸಿಗಳಲ್ಲಿ ಹುಟ್ಟುಹಾಕಿದೆ.

ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕಕ್ಕಿದ್ದ ಕಾನೂನಿನ ಆಡೆತಡೆಗಳೆಲ್ಲವು ನಿವಾರಣೆಯಾದರೂ ಪುರಸಭೆಗೆ ಇಲ್ಲಿನ ಮುಂದುವರಿದ ಕಾಮಗಾರಿಯನ್ನು ಮುಂದುವರಿಸಲು ಮಾತ್ರ ಇನ್ನು ಸಾದ್ಯವಾಗದಿದ್ದು, ಜನರ ತೆರಿಗೆಯ ಹಣವು ಪೋಲಾಗುವ ಲಕ್ಷಣ ಕಂಡು ಬಂದಿದೆ.  ಯಂತ್ರವು ಬರಲಿಲ್ಲ.. ಈ ನಡುವೆ ಕಳೆದ ಜನಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಈ ಘಟಕಕ್ಕೆ ನಿರ್ಮಲ ಬಂಟ್ವಾಳ ಯೋಜನೆಯಡಿ ಪೈರೋಲಿಸಿಸ್ ಯಂತ್ರವು ಮಂಜೂರಾಗಿದ್ದರೂ,ಅದು ಕೂಡ ಕಂಚಿನಡ್ಕಪದವಿನ ತ್ಯಾಜ್ಯ ಸಂಸ್ಕರಣ ಘಟಕದತ್ತ ಇನ್ನು ಬರಲೇ ಇಲ್ಲ..ಇದೀಗ ಶಾಸಕ ರಾಜೇಶ್ ನಾಯ್ಕ್ ಆಧುನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಸಂಸ್ಕರಣ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದು,ರಾಜನುಕುಂಟೆ ಗ್ರಾಮ ಪಂಚಾಯತ್ ಅನುಷ್ಠಾನಕ್ಕೆ ತಂದಿರುವ ತ್ಯಾಜ್ಯ ಸಂಸ್ಕರಣ ಮತ್ತು ಕಸದಿಂದ ರಸ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಪುರವಾಸಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!