ದೂರದೃಷ್ಟಿಯ ಅಗಾಧ ಚಿಂತನೆ ನಾಡಪ್ರಭು ಕೆಂಪೇಗೌಡರಲ್ಲಿತ್ತು : ಎಂಎಲ್‌ಸಿ ವೀಣಾ ಅಚ್ಚಯ್ಯ

ಮಡಿಕೇರಿ: ನಾಡಪ್ರಭು ಕೆಂಪೇಗೌಡರ ಸ್ವಾರ್ಥ ಜೀವನವನ್ನು ಬಿಟ್ಟು ಸಮಾಜಮುಖಿಯಾಗಿ ಯೋಚಿಸಿದರ ಫಲವಾಗಿ ಬೆಂಗಳೂರು ಬೃಹತ್ತಾಗಿ ಬೆಳೆದಿದೆ. ಬೆಂಗಳೂರನ್ನು ಕಟ್ಟಿ ಬೆಳೆಸಿದ ಕೆಂಪೇಗೌಡರ ದೂರದೃಷ್ಟಿಯ ಅಗಾಧ ಚಿಂತನೆಯ ಫಲವಾಗಿ ಇಂದು ಉದ್ಯೋಗ, ಶಿಕ್ಷಣ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಹೆಸರು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಶ್ಲಾಘಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆದರ್ಶ ಆಡಳಿತಗಾರ, ನಾಡಪ್ರಭು ಕೆಂಪೇಗೌಡ ಅವರ ಜೀವನ ಚರಿತ್ರೆಯನ್ನು  ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ವೀಣಾ ಅಚ್ಚಯ್ಯ ಹೇಳಿದರು. 

ಕೊಡಗು-ಹಾಸನ ಜಿಲ್ಲೆಗಳ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರು ಮಾತನಾಡಿ ದೇಶ, ಭಾಷೆ, ಸಂಸ್ಕೃತಿ, ಸಮಗ್ರತೆಯ ಅಭಿವೃದ್ಧಿಗಾಗಿ ಶ್ರಮಿಸಿದ ಪ್ರತಿಯೊಬ್ಬರನ್ನು ಸ್ಮರಿಸುವಂತಾಗಬೇಕು. ಆ ನಿಟ್ಟಿನಲ್ಲಿ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿ ಆದರ್ಶ ಆಡಳಿತಗಾರ ಎಂದು ಹೆಸರು ಪಡೆದರು, ವಿಜಯನಗರ ಸಾಮ್ರಾಜ್ಯದಂತೆ ಬೆಂಗಳೂರನ್ನು ಕಟ್ಟಿ ಬೆಳೆಸಲು ಚಿಕ್ಕ ವಯಸ್ಸಿನಲ್ಲಿಯೇ ಪ್ರಯತ್ನಿಸಿದರು. ಪ್ರಸ್ತುತ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದರು.

ಜಿ.ಪಂ.ಸದಸ್ಯರಾದ ದೀಪಕ್, ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶ್ರೀನಿವಾಸ್, ಪ್ರಮುಖರಾದ ಹೊಸೂರು ಸತೀಶ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!