ಕೆಎಂಸಿಯ ತುರ್ತು ಚಿಕಿತ್ಸಾ ವಿಭಾಗಕ್ಕೆ ‘ಎನ್‌ಎಬಿಎಚ್’ ಮಾನ್ಯತೆ
ಮಣಿಪಾಲ: ಕಳೆದ ಡಿಸೆಂಬರ್ 3ರಿಂದ ಜಾರಿಗೆ ಬರುವಂತೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಪೂರೈಕದಾರರ ಮಾನ್ಯತೆ ಪಡೆದ ಸಂಘ (ಎನ್‌ಎಬಿಹೆಚ್)ವು, ಭಾರತದ ಗುಣಮಟ್ಟದ ಮಂಡಳಿಯ ಮಾನ್ಯತೆ ದೊರೆತಿದೆ.
ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಸಹ ಕುಲಪತಿಗಳಾದ ಡಾ. ವಿನೋದ ಭಟ್ ಅವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಜಯರಾಜ್ ಎಂ ಬಿ ಯವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಮಾಹೆ ಮಣಿಪಾಲದ ಸಹ ಉಪಕುಲತಿಗಳಾದ ಡಾ. ಪೂರ್ಣಿಮಾ ಬಾಳಿಗಾ ಬಿ, ಕುಲಸಚಿವರಾದ ಡಾ. ನಾರಾಯಣ ಸಭಾಹಿತ, ಮಣಿಪಾಲ ಕೆ ಎಂ ಸಿ ಡೀನ್ ಡಾ. ಶರತ್ ಕೆ ರಾವ್, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಸಿ ಜಿ ಮುತ್ತಣ, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಪದ್ಮರಾಜ ಹೆಗ್ಡೆ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಗುಣಮಟ್ಟ ಸಲಹೆಗಾರ ಡಾ. ಸುನೀಲ್ ಮುಂಡ್ಕೂರು ಉಪಸ್ಥಿತರಿದ್ದರು.
ಈ ಪ್ರಮಾಣಪತ್ರದೊಂದಿಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಗುಣಮಟ್ಟ ಮತ್ತು ಮಾನ್ಯತೆಗಳ ಕಿರೀಟಕ್ಕೆ ಇನ್ನೂ ಒಂದು ಗರಿ ಸೇರಿಸಿದೆ. ರೋಗಿಗಳ ಆರೈಕೆ, ರೋಗಿಗಳ ಶಿಕ್ಷಣ ಮತ್ತು ಅರಿವು, ಶುಶ್ರೂಷಾ ಆರೈಕೆಯ ಗುಣಮಟ್ಟ, ಸಂವಹನ ಮತ್ತು ಮಾರ್ಗದರ್ಶನ ಮತ್ತು ಸೋಂಕು ನಿಯಂತ್ರಣ ಅಭ್ಯಾಸಗಳಂತಹ ತುರ್ತು ಔಷಧದ ಎಲ್ಲಾ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಈ ಮಾನ್ಯತೆ ನೀಡಲಾಗುತ್ತದೆ.
ಗುಣಮಟ್ಟ ಮತ್ತು ಸುರಕ್ಷಿತವಾದ ಆರೈಕೆಯನ್ನು ಪಡೆಯುವುದು ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯ ಹಕ್ಕು. ಗುಣಮಟ್ಟದ ತುರ್ತು ವೈದ್ಯಕೀಯ ಆರೈಕೆಯನ್ನು ಒದಗಿಸುವಲ್ಲಿ ತುರ್ತು ಚಿಕಿತ್ಸಾ ವಿಭಾಗ ನಿರ್ಣಾಯಕ ಪಾತ್ರ ವಹಿಸುತ್ತವೆ ಮತ್ತು ಆದ್ದರಿಂದ ಇದು ಆಸ್ಪತ್ರೆಯ ಆರೈಕೆಯ ನೀತಿಯನ್ನು ಪ್ರತಿಬಿಂಬಿಸುತ್ತದೆ. ಕಸ್ತೂರ್ಬಾ ಆಸ್ಪತ್ರೆಯು ಒದಗಿಸಿರುವ ತುರ್ತು ಚಿಕಿತ್ಸಾ ಸೇವೆಗಳಿಗೆ ಈ ಪ್ರಮಾಣಪತ್ರವನ್ನು ನೀಡಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ತುರ್ತು ಚಿಕಿತ್ಸಾ ವಿಭಾಗ, ಪ್ಲಾಸ್ಟಿಕ್ ಸರ್ಜರಿ ವಿಭಾಗ, ಮಕ್ಕಳ ವಿಭಾಗ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗಗಳು ಸೇರಿದೆ.