ಎನ್ ಕೌಂಟರ್: ಮನೇಕಾ ಗಾಂಧಿ,ಕೇಜ್ರಿವಾಲ್,ಕಾರ್ತಿ ಚಿದಂಬರಂ ಸೇರಿ ಹಲವರ ಅಪಸ್ವರ
ನವದೆಹಲಿ: ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಹೇಯ ಕೃತ್ಯ ಎಸಗಿದವರನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಇಡೀ ದೇಶವೇ ಸಂಭ್ರಮಿಸುತ್ತಿದೆ, ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕಾರ್ತಿ ಚಿದಂಬರಂ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ದೇಶದ ಜನ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ಭರವಸೆ ಕಳೆದುಕೊಳ್ಳುವ ಮೊದಲೇ ಸರ್ಕಾರ ಎಚ್ಚೆತ್ತುಕೊಂಡು, ಕ್ರಿಮಿನಲ್ ಪ್ರಕರಣ ಗಳ ತ್ವರಿತ ವಿಚಾರಣೆ ನಡೆಸುವಂತೆ ನ್ಯಾಯಾಂಗ ವ್ಯವಸ್ಥೆಯನ್ನು ಸುಭದ್ರಗೊಳಿಸಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅತ್ಯಾಚಾರ ಮಾಡುವುದು ಅತ್ಯಂತ ಹೇಯ ಕೃತ್ಯ. ಕಾನೂನಿನ ಚೌಕಟ್ಟಿನಲ್ಲಿ ಇಂಥವರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಬೇಕು. ಅತ್ಯಾಚಾರದಂಥ ಹೇಯ ಕೃತ್ಯ ಮಾಡಿದವರನ್ನು ನಾನು ಬೆಂಬಲಿಸದಿದ್ದರೂ ಎನ್ ಕೌಂಟರ್ ಮೂಲಕ ಅವರನ್ನು ಹತ್ಯೆ ಮಾಡುವುದು ಸಮಾಜಕ್ಕೆ ಅಂಟಿದ ಕಳಂಕ. ಅನ್ಯಾಯಕ್ಕೊಳಗಾದವರಿಗೆ ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡಬೇಕಾಗಿರುವುದು ನಿಜವಾದರೂ ಈ ರೀತಿ (ಎನ್ ಕೌಂಟರ್) ರೀತಿ ಬೇಕಾಗಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಪೊಲೀಸರು ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ. ಆರೋಪಿಗಳನ್ನು ನ್ಯಾಯಾಲಯವೇ ನೇಣಿಗೇರಿಸುತ್ತಿತ್ತು. ಅವರನ್ನು ಎನ್ ಕೌಂಟರ್ ಮಾಡುವ ಮುನ್ನ ನ್ಯಾಯಾಲಯದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿತ್ತು ಎಂದು ಹೇಳಿದ್ದಾರೆ.