ನನ್ನ ಭಯ ಬಿಜೆಪಿಯವರಿಗೂ, ನಮ್ಮ ಶಾಸಕರಿಗೂ, ಯಾರಿಗೂ ಬೇಡ ಡಿ.ಕೆ.ಶಿವಕುಮಾರ್‌

ಬೆಂಗಳೂರು: ‘ನನ್ನ ಭಯ ಬಿಜೆಪಿಯವರಿಗೂ, ನಮ್ಮ ಶಾಸಕರಿಗೂ, ಯಾರಿಗೂ ಬೇಡ. ನಾನು ಯಾವ ರೌಡಿಯನ್ನು ಕರೆದುಕೊಂಡು ಬಂದಿಲ್ಲ. ನಮ್ಮ ಶಾಸಕರೊಂದಿಗೆ ಬಂದಿದ್ದೇನೆ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.
ಶಾಸಕರನ್ನು ಮಾತನಾಡಿಸಲು ಮುಂಬೈನ ರೆನೈಸರ್‌ ಹೋಟೆಲ್‌ಗೆ ಹೋಗಿರುವ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ‘ಬಿಜೆಪಿಯ ನಾಯಕರು ಬಲವಂತವಾಗಿ ದೂರು ಕೊಡಿಸಿದ್ದಾರೆ. ನಮ್ಮ ಶಾಸಕರು ಕರೆಯದೆ ನಾವು ಬರುತ್ತೇವೆಯೇ. ಗಂಡ–ಹೆಂಡತಿ ಜಗಳವನ್ನು ನಾವು ಸರಿಪಡಿಸಿಕೊಳ್ಳುತ್ತೇವೆ’ ಎಂದರು.
ಹೋಟೆಲ್‌ನ ಗೇಟ್‌ ಬಳಿಯೇ ಡಿ.ಕೆ.ಶಿವಕುಮಾರ್ ಅವರನ್ನು ಪೊಲೀಸರು ತಡೆದಿದ್ದಾರೆ. ಮಳೆಯ ನಡುವೆಯೇ ಒಂದು ತಾಸಿನಿಂದ ಹೋಟೆಲ್‌ ಒಳಗೆ ಹೋಗಲು ಅವರು ಕಾಯುತ್ತಿದ್ದಾರೆ.
‘ಒಬ್ಬ ಗ್ರಾಹಕನಂತೆ ನಾನು ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿದ್ದೇನೆ. ಅವರು ನನಗೆ ಒಳಗೆ ಹೋಗಲು ಅವಕಾಶ ನೀಡಲೇ ಬೇಕು. ಅವರು ಒಳಗೆ ಕರೆಯುವವರೆಗೂ ನಾನು ಇಲ್ಲೇ ಕಾಯುತ್ತೇನೆ’ ಎಂದು ಹೇಳಿದರು.
‘ನಮ್ಮ ಬಗ್ಗೆ ಅನುಮಾನ ಇದ್ದರೆ, ಪೊಲೀಸರೇ ನಮ್ಮ ಜೊತೆ ಬರಲಿ. ಹೋಟೆಲ್‌ನಲ್ಲಿ ವಿರಾಮ ಪಡೆಯುತ್ತೇವೆ. ಅದಕ್ಕೂ ಅವಕಾಶ ನೀಡದಿರುವುದು ನೋಡಿದರೆ, ಇದರಲ್ಲಿ ಬಿಜೆಪಿಯ ಕೈವಾಡ ಇದೆ ಎನ್ನುವುದು ಸ್ಪಷ್ಟವಾಗುತ್ತದೆ’ ಎಂದರು.
ಹೋಟೆಲ್‌ನಲ್ಲಿ ‘ಗೋ ಬ್ಯಾಕ್‌ ಶಿವಕುಮಾರ್‌’ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲ ಸಮಯದ ನಂತರ ‘ಡರ್‌ ಗಯಾ ಶಿವಕುಮಾರ್‌’ ಎಂದು ಘೋಷಣೆಗಳನ್ನು ಕೂಗಿದರು.

Leave a Reply

Your email address will not be published. Required fields are marked *

error: Content is protected !!