ಬೆಳ್ಮಣ್ಣು ಮಹಿಳೆ ಕೊಲೆ: ಉಂಡ ಮನೆಗೆ ದ್ರೋಹ ಬಗೆದ ಮತ್ತೋರ್ವ ಬಂಧನ
ಕಾರ್ಕಳ: ಕುಡಿತ ಹಾಗೂ ಶೋಕಿ ಜೀವನ ನಡೆಸುವ ಸಲುವಾಗಿ ಕಂಡವರ ಮನೆದೋಚಿ ಸಭ್ಯರಂತೆ ಓಡಾಡುತ್ತಿದ್ದ ನಟೋರಿಯಸ್ ಗ್ಯಾಂಗನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ಬೆಳ್ಮಣ್ಣು ಗ್ರಾಮದ ಮಡ್ಕುಕರೆ ಎಂಬಲ್ಲಿನ ಮಹಿಳೆ ಭರತಲಕ್ಷ್ಮೀ ಉಡುಪ ಎಂಬವರು ಕಾಣೆಯಾಗಿ 2 ದಿವಗಳ ಬಳಿಕ ಕಲ್ಯಾದ ಪಾಳು ಬಾವಿಯಲ್ಲಿ ಮೃತದೇಹ ಪ್ಲಾಸ್ಟಿಕ್ ಸುತ್ತಿದ ರೀತಿಯಲ್ಲಿ ಪತ್ತೆಯಾದ ನಂತರ ಎಚ್ಚೆತ್ತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮರಣೋತ್ತರ ಪರೀಕ್ಷೆಯ 3 ಗಂಟೆಯೊಳಗೆ ಮೃತಪಟ್ಟ ಮಹಿಳೆಯ ಚಿನ್ನಾಭರಣವನ್ನು ಆರೋಪಿಗಳ ಮನೆಯಿಂದ ವಶಪಡಿಸಿಕೊಂಡು ಆರೋಪಿಗಳ ಬಂಧನಕ್ಕೆ ಜಾಲಬೀಸಿದ್ದರು.
ಮಹಿಳೆ ಕೊಲೆಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಕೊಲೆ ಆರೋಪಿಗಳಾದ ರೋಹಿತ್ ಮಥಾಯಿಸ್(28) ,ರೊನಾಲ್ಡ್ ಬರ್ಬೋಜಾ(45) ಹಾಗೂ ಸ್ಟೀವನ್ ಡಯಾಸ್(22) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಕೊಲೆಪ್ರಕರಣದ ಕುರಿತಂತೆ ಮಹಿಳೆಯನ್ನು ಕೊಲೆ ಮಾಡಿ ಹಣ ಪಡೆಯುವಂತೆ ಸಂಚು ರೂಪಿಸಿದ್ದ ರೋಹಿತ್ ಮಥಾಯಿಸ್ ಮನೆಗೆ ಇನ್ನೋರ್ವ ಆರೋಪಿ ರೋನಾಲ್ಡ್ ಬರ್ಬೋಜಾ ಮಗಳು ರೆನಿಟಾ ಪ್ರಿಯಾ ಆಕೆಯ ಇಬ್ಬರು ಗೆಳೆಯರಾದ ಮೊಹಮ್ಮದ್ ಸಾಹೇಬ್ ಹಾಗೂ ಮೊಹಮ್ಮದ್ ಫಯಾಜ್ ಅವರನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ಕೊಲೆ ಆರೋಪಿಗಳಾದ ರೊನಾಲ್ಡ್ ಬರ್ಬೋಜಾ ಹಾಗೂ ಸ್ಟೀವನ್ ಡಯಾಸ್ ಇಬ್ಬರು ಗೆಳೆಯರಾಗಿದ್ದು ಇವರು ನಿತ್ಯ ಕುಡಿದು ಮೋಜುಮಸ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೊಲೆಯಾದ ಭರತಲಕ್ಷ್ಮೀ ಉಡುಪ ಅವರ ಮನೆಯ ಸಮೀಪದ ರೋಹಿತ್ ಮಥಾಯಿಸ್ ಈ ಕೊಲೆ ಸಂಚಿನ ಪ್ರಧಾನ ಆರೋಪಿ. ಈತ ಬಾಲ್ಯದಿಂದಲೂ ಭರತಲಕ್ಷ್ಮೀ ಮನೆಯಲ್ಲೇ ತಿಂದುಂಡು ಬೆಳೆದಿದ್ದ. ಈತನ ಇನ್ನಿಬ್ಬರು ಗೆಳೆಯರಾದ ರೊನಾಲ್ಡ್ ಹಾಗೂ ಸ್ಟೀವನ್ ಕೂಡ ಆಗಾಗ ಭರತಲಕ್ಷ್ಮೀ ಉಡುಪರವರ ಮನೆಗೆ ಹೋಗಿ ಬರುತ್ತಿದ್ದರು. ಇತ್ತ ಸಣ್ಣಪುಟ್ಟ ಕಳ್ಳತನದಿಂದ ಕುಡಿತ, ಮೋಜು ಮಾಡುತ್ತಿದ್ದ ರೋನಾಲ್ಡ್‌ಗೆ ಹಣ ಮಾಡಲು ಭರತಲಕ್ಷ್ಮೀಯವರನ್ನು ಕೊಲೆ ಮಾಡಲು ಪ್ಲಾನ್ ಹೇಳಿಕೊಟ್ಟಿದ್ದೇ ರೋಹಿತ್ ಮಥಾಯಿಸ್. ಭರತಲಲಕ್ಷ್ಮೀಯವರ ಬಳಿ ಅಪಾರ ಚಿನ್ನಾಭರಣವಿದೆ ಅವರ ಮಗ ಕೆಲಸಕ್ಕೆ ಹೋಗುತ್ತಾನೆ ಆ ಸಂದರ್ಭದಲ್ಲಿ ಆಕೆಯನ್ನು ಮುಗಿಸಿದ್ರೆ ಸುಳಭದಲ್ಲಿ ಹಣ ಮಾಡಬಹುದು ಇದರಲ್ಲಿ ತನಗೂ ಪಾಲು ಕೊಡಬೇಕೆಂದು ಹೇಳಿ ರೊನಾಲ್ಡ್ ಬಳಿ ಒಂದಷ್ಟು ಹಣ ಪಡೆದು ರೋಹಿತ್ ಕೇರಳಕ್ಕೆ ಹೋಗಿದ್ದ. ಈನಡುವೆ ಕೊಲೆಗೆ ಸ್ಕೆಚ್ ಹಾಕಿದ್ದ ರೊನಾಲ್ಡ್ ಹಾಗೂ ಸ್ಟೀವನ್ ಒಂದೆರಡು ಬಾರಿ ವಿಫಲರಾಗಿದ್ದರು.
ಈ ನಡುವೆ ರೊನಾಲ್ಡ್‌ನಿಂದ ಹಣಪಡೆದು ಕೇರಳಕ್ಕೆ ಹೋಗಿದ್ದ ರೋಹಿತ್ ಮಥಾಯಿಸ್ ಬಳಿ ಹಣ ಕೊಡುವಂತೆ ಒತ್ತಾಯಿಸಿದ್ದರೂ ಆತನ ಹಣ ಕೊಡಲೊಪ್ಪದ ಹಿನ್ನಲೆಯಲ್ಲಿ ರೊನಾಲ್ಡ್ ಬರ್ಬೋಜಾ ತನ್ನ ಮಗಳು ರೆನಿಟಾ ಪ್ರಿಯಾ ಹಾಗೂ ಆಕೆಯ ಇಬ್ಬರು ಗೆಳೆಯರಾದ ಮೊಹಮ್ಮದ್ ಸಾಹೇಬ್ ,ಮೊಹಮ್ಮದ್ ಫಯಾಜ್ ಅವರನ್ನು ರೋಹಿತ್ ಮನೆಗೆ ಕಳುಹಿಸಿ ರೋಹಿತ್ ಸಂಬಂಧಿ ಐರಿಸ್ ಮಥಾಯಿಸ್ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ್ದರು. ಈ ಪ್ರಕರಣ ನಡೆದ ಬಳಿಕ ಡೆಸೆಂಬರ್ 20 ರಂದು ರೊನಾಲ್ಡ್ ಬರ್ಬೋಜಾ ಹಾಗೂ ಸ್ಟೀವನ್ ಡಯಾಸ್ ಬೆಳಗ್ಗೆ ಕಾರಿನಲ್ಲಿ ಭರತಲಕ್ಷ್ಮೀ ಮನೆಗೆ ಬಂದವರು ಅವರ ಕುತ್ತಿಗೆ ಹಿಸುಕಿ ಪ್ರಜ್ಞೆ ತಪ್ಪಿದ ಬಳಿಕ ಮೃತಪಟ್ಟಿದ್ದಾರೆಂದು ಭಾವಿಸಿ ಅವರ ದೇಹವನ್ನು ಪ್ಲಾಸ್ಟಿಕ್ ಕವರಲ್ಲಿ ಸುತ್ತಿ ಕಲ್ಯಾ ಗ್ರಾಮದ ಮೂಡುಮನೆ ಎಂಬಲ್ಲಿನ ಪಾಳು ಬಾವಿಗೆ ಎಸೆದಿದ್ದರು. ಬಳಿಕ ಭರತಲಕ್ಷ್ಮೀಯವರ ಚಿನ್ನಾಭರಣವನ್ನು ರೋನಾಲ್ಡ್ ಮನೆಯ ಲಾಕರಿನಲ್ಲಿ ಬಚ್ಚಿಟ್ಟಿದ್ದರು. ಈ ಕೊಲೆಯ ರಹಸ್ಯ ಬಯಲಿಗೆಳೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಮೊದಲಿಗೆ ಸಂಶಯಗೊಂಡು ರೊನಾಲ್ಡ್ ಮನೆಗೆ ಹೋಗಿ ಮನೆಮಂದಿಯನ್ನು ವಿಚಾರಿಸಿದಾಗ ತನಿಖೆಗೆ ಸ್ಪಂದಿಸದ ಹಿನ್ನಲೆಯಲ್ಲಿ ಠಾಣೆಗೆ ಕರೆಯಿಸಿದಾಗ ವಿಚಾರಣೆವೇಳೆ ಕೊಲೆ ರಹಸ್ಯ ಬಾಯಿಬಿಟ್ಟಿದ್ದರು.ಬಳಿಕ ಚಿನ್ನಾಭರಣ ವಶಕ್ಕೆ ಪಡೆದು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದರು.
ಈ ಪ್ರಕರಣದಲ್ಲಿನ ಪ್ರಮುಖ ಆರೋಪಿ ರೊನಾಲ್ಡ್ ಬರ್ಬೋಜಾ ನಟೋರಿಯಸ್ ಕಳ್ಳನಾಗಿದ್ದು ಆತ ಈ ಹಿಂದೆ ಸಾಕಷ್ಟು ಕಳ್ಳತನದಲ್ಲಿ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ ಯಶಸ್ವೀಯಾಗಿದ್ದರೆ ಹಣಕ್ಕಾಗಿ ಪಡುಬಿದ್ರೆಯ ಸಾಂತೂರುಕೊಪ್ಲದ ಇನ್ನೋರ್ವ ಉದ್ಯಮಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬಾಯಿಬಿಟ್ಟಿದ್ದ.ರೊನಾಲ್ಡ್ ಬರ್ಬೋಜಾ ಮಗಳು ರೆನಿಟಾ ಪ್ರಿಯಾ ಕೂಡ ಅಪ್ಪನಂತೆ ಕಳ್ಳತನದಲ್ಲಿ ಭಾಗಿಯಾಗಿದ್ದು ಈಕೆ ತನ್ನಿಬ್ಬರು ಗೆಳೆಯೊಂದಿಗೆ ಕಳ್ಳತನ ದಂಧೆಗೆ ಇಳಿದಿದ್ದಳು. ಇದಲ್ಲದೇ ಈಕೆ ಸಾಕಷ್ಟು ಜನರ ಸಂಪರ್ಕ ಹೊಂದಿದ್ದು ಇವರ ಬಂಧನವಾಗದಿದ್ದಲ್ಲಿ ಇನ್ನಷ್ಟು ದರೋಡೆ ನಡೆಸಲೂ ಸಂಚು ರೂಪಿಸಿದ್ದರು ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಅತ್ಯಂತ ಕ್ಲಿಷ್ಟಕರವಾಗಿದ್ದ ಈ ಕೊಲೆಪ್ರಕರಣವನ್ನು ಕಾರ್ಕಳ ಗ್ರಾಮಾಂತರ ಎಸೈ ನಾಸಿರ್ ಹುಸೇನ್ ಅವರ ತಂಡ ಯಶಸ್ವೀಯಾಗಿ ಬೇಧಿಸಿದ್ದು ಈ ಪ್ರಕರಣದಲ್ಲಿ ಭಾಗಿಯಾಗಿದ್ದ 6 ಜನ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.