ಮುಂಬೈ: 3 ವೈದ್ಯರು, 26 ನರ್ಸ್ ಗಳಿಗೆ ಕೊರೋನಾ ಸೋಂಕು ಆಸ್ಪತ್ರೆ ಸ್ಥಗಿತ!

ಮುಂಬೈ: ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಇದೀಗ ತನ್ನ ನಿಜವಾದ ಕೌರ್ಯ ಮೆರೆಯುತ್ತಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ನರ್ಸ್ ಗಳಿಗೇ ಕೊರೋನಾ ವೈರಸ್ ಸೋಂಕು ತಗುಲಿದ ಪರಿಣಾಮ ಇಡೀ ಆಸ್ಪತ್ರೆಯನ್ನೇ ಸ್ಥಗಿತಗೊಳಿಸಿರುವ ಘಟನೆ  ನಡೆದಿದೆ.

ಕೊರೋನಾ ವೈರಸ್ ದಾಳಿಗೆ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರಿ ಅಕ್ಷರಶಃ ನಲುಗಿ ಹೋಗಿದ್ದು, ಇಲ್ಲಿ ಬರೊಬ್ಬರಿ 690ಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದು, 45 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಆತಂಕಕಾರಿ ವಿಚಾರವೆಂದರೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಖಾಸಗಿ  ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ ಗಳಿಗೇ ಸೋಂಕು ತಗುಲಿದ ಪರಿಣಾಮ ಇಡೀ ಆಸ್ಪತ್ರೆಯನ್ನೇ ಸ್ಥಗಿತಗೊಳಿಸಲಾಗಿದೆ.

ಮುಂಬೈನ ಹೃದಯಭಾಗದಲ್ಲಿರುವ ಖಾಸಗಿ ವೋಕ್ಹಾರ್ಡ್ ಆಸ್ಪತ್ರೆಯ ಮೂವರು ವೈದ್ಯರು ಮತ್ತು 26 ನರ್ಸ್‌ಗಳಿಗೆ ಕೊರೋನಾ ವೈರಸ್‌ ಸೋಂಕು ತಗುಲಿದ್ದು, ಸರ್ಕಾರ ಇಡೀ ಆಸ್ಪತ್ರೆಯನ್ನೇ ಕೋವಿಡ್‌ ಹಾಟ್‌ಸ್ಪಾಟ್‌ ಎಂದು ಘೋಷಣೆ ಮಾಡಿದೆ. ಅಲ್ಲದೆ, ಆಸ್ಪತ್ರೆಯನ್ನು ಸೋಂಕಿತ  ಪ್ರದೇಶ ಎಂದು ಪರಿಗಣಿಸಿದ್ದು, ಇಡೀ ಆಸ್ಪತ್ರೆಯನ್ನೇ ಮುಚ್ಚಲಾಗಿದೆ. ಮೂಲಗಳ ಪ್ರಕಾರ ಈ ಆಸ್ಪತ್ರೆಯಲ್ಲಿ 270ಕ್ಕೂ ಅಧಿಕ ನರ್ಸ್ ಗಳು ಸೇವೆ ಸಲ್ಲಿಸುತ್ತಿದ್ದು, ಇದೀಗ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ. ಆಸ್ಪತ್ರೆಗೆ ಬರುವ ಮತ್ತು ಹೋಗುವ ರೋಗಿಗಳು, ಅವರ  ಸಂಬಂಧಿಕರು ಮತ್ತು ಇತರರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರಸ್ತುತ ವೈರಸ್ ಕಂಡು ಬಂದ ಹಿನ್ನಲೆಯಲ್ಲಿ ಇಡೀ ಆಸ್ಪತ್ರೆಯನ್ನು ಮುಚ್ಚಲಾಗಿದೆ. 

ಇದರ ಜತೆಗೇ, ಆಸ್ಪತ್ರೆಯಲ್ಲಿ ಈ ಮಟ್ಟಕ್ಕೆ ಸೋಂಕು ವ್ಯಾಪಿಸಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಕೇಂದ್ರ ತನಿಖೆಗೂ ಆದೇಶಿಸಿದೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸೋಂಕು ಇದೆಯೇ ಇಲ್ಲವೇ ಎಂಬುದನ್ನು ಎರಡೆರಡು ಬಾರಿ ಪರೀಕ್ಷೆ ಮಾಡುವವರೆಗೆ ಆಸ್ಪತ್ರೆಯನ್ನು ಮುಚ್ಚಲು  ನಿರ್ಧರಿಸಲಾಗಿದೆ. 

ಕೊರೋನಾ ವೈರಸ್‌ ನಿಯಂತ್ರಿಸಲು ಸರ್ಕಾರ ಭಾನುವಾರ ಅತ್ಯಂತ ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. ಸೋಂಕಿತ ಪ್ರದೇಶಗಳಿಗೆ ಒಂದು ತಿಂಗಳ ಕಾಲ ನಿರ್ಬಂಧ ವಿಧಿಸುವುದೂ ಆ ನಿರ್ಧಾರಗಳಲ್ಲಿ ಒಂದು. ರೋಗ ನಿಯಂತ್ರಣಕ್ಕಾಗಿ ಚೀನಾ ಅನುಸರಿಸಿದ್ದ ಮಾರ್ಗ ಇದಾಗಿತ್ತು.  ಅದರಂತೇ ಸದ್ಯ ಈ ಆಸ್ಪತ್ರೆಯನ್ನು ಮುಚ್ಚಲಾಗಿದೆ. ಕನಿಷ್ಠ 4 ವಾರಗಳ ಕಾಲ ನಿರ್ಧಿಷ್ಟ ಪ್ರದೇಶದಿಂದ ಹೊಸ ಸೋಂಕು ವರದಿಯಾಗದೇ ಇದ್ದರೆ ಮಾತ್ರ ಸರ್ಕಾರ ನಿರ್ಬಂಧಗಳನ್ನು ತೆರವು ಮಾಡುತ್ತದೆ ಎಂದು ತಿಳಿದುಬಂದಿದೆ,

Leave a Reply

Your email address will not be published. Required fields are marked *

error: Content is protected !!