ಮುದರಂಗಡಿ: ಗಾಂಧೀ ಜಯಂತಿಗೆ “ಗೋವು ಮೇವು”
ಕಾಪು: ತಾಲೂಕಿನ ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾನುವಾರದಂದು ಟೀಮ್ ಡೇವಿಡ್ ಡಿಸೋಜ ಸ್ವಯಂ ಸೇವಾ ಸಂಸ್ಥೆಯಿಂದ “ಗೋವು ಮೇವು” ಎನ್ನುವ ಕಾರ್ಯಕ್ರಮ ನಡೆಯಿತು.
ಗಾಂಧೀ ಜಯಂತಿಯ ಹಿನ್ನೆಲೆಯಲ್ಲಿ ಸ್ವಚ್ಚತೆಯ ದೃಷ್ಟಿಯಿಂದ ನಡೆದ ಈ ಕಾರ್ಯಕ್ರಮವನ್ನು ಸ್ವಯಂ ಸೇವಾ ಸಂಸ್ಥೆಯ ಗೌರವಾಧ್ಯಕ್ಷರಾದ ಡೇವಿಡ್ ಡಿಸೋಜ ಅವರು ಚಾಲನೆ ನೀಡಿದರು.
ಮುದರಂಗಡಿಯ ರಸ್ತೆ ಬದಿಗಳಲ್ಲಿ ಬೆಳೆದಿದ್ದ ಹುಲ್ಲುಗಳನ್ನು ತಂಡದ ಸದಸ್ಯರು ಶ್ರಮಾದಾನದ ಮೂಲಕ ಕಟಾವುಗೊಳಿಸಿದರು. ಕಾರ್ಯಕ್ರಮ ಚಾಲನೆಯ ಬಳಿಕ ಮಾತನಾಡಿದ ಪ್ರದೀಪ್ ಬೇಲಾಡಿ ಅವರು ಟೀಮ್ ಡೇವಿಡ್ ಡಿಸೋಜ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಮಾಡುತಿದ್ದು ಅದರಲ್ಲಿ ಕಳೆದ ವರ್ಷ ಕೊಡುಗು ಜಿಲ್ಲೆಯಲ್ಲಿ ನಡೆದ ಪ್ರಾಕೃತಿಕ ವಿಕೋಪ ಹಾಗೂ ಈ ಭಾರಿ ಉತ್ತರ ಕರ್ನಾಟಕದಲ್ಲಿ ನಡೆದ ಜಳಪ್ರಳಯದಲ್ಲಿ ಸಂತ್ರಸ್ತರಾದವರಿಗೆ ಜೀವನಾವಶ್ಯಕ ಸಾಮಗ್ರಿಗಳನ್ನು ವಿತರಿಸಿರುವುದನ್ನು ವಿವರಿಸಿದರು.
ತಂಡದ ಮುಂದಿನ ಯೋಜನೆಯಾದ ಶ್ರದ್ದಾ ಕೇಂದ್ರಗಳಲ್ಲಿ ಕರಸೇವೆಯ ಬಗ್ಗೆ ಮಾಹಿತಿ ನೀಡಿದರು. ಶ್ರಮಾದಾನದಲ್ಲಿ ಟೀಮ್ ಡೇವಿಡ್ ಡಿಸೋಜದ ಪ್ರಮುಖರಾದ ಯೋಗೀಶ್ ಆಚಾರ್ಯ ಇನ್ನಾ, ನರಸಿಂಹ ಶೆಣೈ, ಅಲಗೇಶ್, ಪ್ರಭಾಕರ ಆಚಾರ್ಯ ಕಟಪಾಡಿ ಹಾಗೂ ಸದಸ್ಯರು ಮತ್ತು ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.
ಕಟಾವುಗೊಳಿಸಲಾದ ಹುಲ್ಲುಗಳನ್ನು ಎರಡು ವಾಹನಗಳಲ್ಲಿ ತುಂಬಿ ಬ್ರಹ್ಮಾವರ ಸಮೀಪದ ನೀಲಾವರ ಗೋಶಾಲೆಗೆ ಸಾಗಿಸಲಾಯಿತು. ತಂಡದ ಗೌರವಾಧ್ಯಕ್ಷರಾದ ಡೇವಿಡ್ ಡಿಸೋಜ ಇವರು ತಂಡದೊಂದಿಗೆ ಗೋಶಾಲೆಯ ತನಕವೂ ಬಂದು ಕಾರ್ಯಕ್ರಮದ ಯಶಸ್ವಿಗೆ ಕಾರಣಿಕರ್ತರಾದರು.