ಸಿದ್ದಾರ್ಥ್ ನಿಧನಕ್ಕೆ ಸಂತಾಪಗಳ ಮಹಾಪೂರ

ಬೆಂಗಳೂರು: ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕರ ಸಾವಿಗೆ ಸಂತಾಪ ಸೂಚಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಸ್.ಎಂ ಕೃಷ್ಣ ಅವರ ಪಾಲಿಗೆ ಮಗನೇ ಆಗಿದ್ದ ಸಿದ್ಧಾರ್ಥ್ ಸಾವಿನಿಂದ ಆಘಾತವಾಗಿದೆ ಎಂದಿದ್ದಾರೆ.

ಸಿದ್ಧಾರ್ಥ್ ಅವರ ಸಾವಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಉದ್ಯಮಿ ವಿ.ಜಿ ಸಿದ್ಧಾರ್ಥ್ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕೀಡಾಗಿದ್ದೇನೆ. ತಮ್ಮ ಪಾಲಿಗೆ ಮಗನೇ ಆಗಿದ್ದ ಸಿದ್ಧಾರ್ಥ್ ಅವರ ಅಗಲಿಕೆಯಿಂದ ಎಸ್.ಎಂ.ಕೃಷ್ಣ ಮತ್ತು ಕುಟುಂಬ ವರ್ಗ ಅನುಭವಿಸುತ್ತಿರುವ ನೋವು-ಸಂಕಟಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.

ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ಧಾರ್ಥ್ ಸಾವು ಆಘಾತ ತಂದಿದೆ- ಹೆಚ್‍ಡಿಕೆ

ಆತ್ಮೀಯ ಗೆಳೆಯನ ಸಾವಿನ ಸುದ್ದಿ ಆಘಾತ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಗೆಳೆಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ಉದ್ಯಮಿ ಹಾಗೂ ಆತ್ಮೀಯ ಗೆಳೆಯ ಸಿದ್ಧಾರ್ಥ್ ಅವರ ನಿಧನದ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ. ಕಳೆದ 25 ವರ್ಷಗಳ ಸ್ನೇಹಿತ ಸಿದ್ಧಾರ್ಥ್ ಅವರು ಕರ್ನಾಟಕದ ಕಾಫಿ ಉದ್ಯಮವನ್ನು ವಿಶ್ವಕ್ಕೆ ಪರಿಚಯಿಸಿದ್ದರು. ಸಹಸ್ರಾರು ನೌಕರರಿಗೆ ತಮ್ಮ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿದ್ದರು. ಅವರ ನಿಧನದಿಂದ ಕರ್ನಾಟಕ ಶ್ರೇಷ್ಠ ಉದ್ಯಮಿಯೊಬ್ಬರನ್ನು ಕಳೆದುಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ಧಾರ್ಥ್ ಗೆ ಆದ ಪರಿಸ್ಥಿತಿಯೇ ನನಗೂ ಆಗುತ್ತಿದೆ: ಉದ್ಯಮಿ ವಿಜಯ್ ಮಲ್ಯ ಟ್ವೀಟ್

ಲಂಡನ್: ಕಾಫಿ ಡೇ ಉದ್ಯಮಿ ಸಿದ್ಧಾರ್ಥ್ ಗೆ ಆದ ಪರಿಸ್ಥಿತಿಯೇ ನನಗೂ ಆಗುತ್ತಿದೆ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
ಭಾರತೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ಸಾಲ ಪಡೆದು, ಮರುಪಾವತಿ ಮಾಡದೇ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, ‘ನಾನು ವಿ.ಜಿ ಸಿದ್ದಾರ್ಥ ಅವರೊಂದಿಗೆ ಪರೋಕ್ಷವಾಗಿ ಸಂಬಂಧ ಹೊಂದಿದ್ದೇನೆ. ಅವರೊಬ್ಬ ಒಳ್ಳೆಯ ವ್ಯಕ್ತಿ ಹಾಗೂ ಉತ್ತಮ ಉದ್ಯಮಿ. ಅವರ ಪತ್ರದಲ್ಲಿರೋ ಸಾರಾಂಶ ನೋಡಿ ನನ್ನ ಹೃದಯ ನುಚ್ಚುನಾರಾಯ್ತು. ಸರ್ಕಾರಿ ಏಜೆನ್ಸಿಗಳು ಹಾಗೂ ಬ್ಯಾಂಕ್ ಗಳು ಎಂಥವರನ್ನೂ ಹತಾಶೆಗೆ ದೂಡಿಬಿಡುತ್ತವೆ. ನಾನು ಸಂಪೂರ್ಣ ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ನನಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಮತ್ತೊಂದು ಟ್ವೀಟ್ ನಲ್ಲಿ ವಿದೇಶಗಳಲ್ಲಿ ಅಲ್ಲಿನ ಸರ್ಕಾರ ಮತ್ತು ಬ್ಯಾಂಕ್ ಗಳು ಸಾಲಗಾರರು ಮಾಡಿದ ಸಾಲ ತೀರಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ನನ್ನ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ. ನಾನು ಸಾಲ ತೀರಿಸಲು ಮಾಡಿದ ಪ್ರತಿ ಪ್ರಯತ್ನದಲ್ಲೂ ಸರ್ಕಾರ ಮತ್ತು ಬ್ಯಾಂಕ್ ಗಳು ತಡೆಗೋಡೆಯಾಗಿ ನಿಂತಿವೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!