ಮೂಢ ನಂಬಿಕೆಗಳಿಗೆ ನಿಷೇಧ ಬಿಜೆಪಿಯಿಂದ ಯುಟರ್ನ್: ಭಾಸ್ಕರ್ ರಾವ್
ಉಡುಪಿ: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಅವಧಿಯಲ್ಲಿ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಧರ್ಮ ವಿರೋಧಿ, ಹಿಂದೂ ವಿರೋಧಿ ಎಂದು ದೂಷಿಸುತ್ತಾ ಅಪಪ್ರಚಾರ ಮಾಡಿ ಮಸೂದೆಯನ್ನು ತಡೆಯಲು ಪ್ರಯತ್ನಿಸಿತ್ತು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದುಷ್ಟ ಪದ್ದತಿಗಳು, ಮಾಟ ಮಂತ್ರ ಮತ್ತು ವಾಮಾಚಾರ ನಿಯಂತ್ರಿಸುವ ಮಸೂದೆ 2017 ನ್ನು ಜಾರಿಗೊಳಿಸಲು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು.
ಆದರೆ ಅಂದು ಈ ಕಾಯ್ದೆಯನ್ನು ಹಿಂದೂ ಧರ್ಮವನ್ನು ಮಾತ್ರ ಗುರಿಯಾಗಿಟ್ಟು ಕೊಂಡು ಹಿಂದೂ ಧರ್ಮೀಯರ ಆಚರಣೆಯನ್ನು ನಿಷೇಧಿಸಲಾಗುತ್ತಿದೆ ಎಂದು ವಿರೋಧಿಸಿದ್ದ ಬಿಜೆಪಿ ಇಂದು ಈ ಕಾಯ್ದೆಯನ್ನು ಯಾವುದೇ ಬದಲಾವಣೆ ಇಲ್ಲದೆ ಜಾರಿಗೆ ತಂದಿದೆ. ಬಿಜೆಪಿ ಯಾವಾಗಲೂ ತನ್ನ ಇಬ್ಬಂಗಿತನವನ್ನು ಪ್ರದರ್ಶಿಸುವುದು ಇದರಿಂದ ಋಜುವಾತಾಗಿದೆ. ಒಂದು ಕಡೆ ಮುಸ್ಮಿಮರನ್ನು ದ್ವೇಷಿಸುವಂತೆ ನಟಿಸುವುದು ಇನ್ನೊಂದು ಕಡೆ ಅವರಿಗೆ ಹೆಚ್ಚಿನ ಅನುದಾನವನ್ನು ನೀಡಿ ಸಂತೃಪ್ತಿಗೊಳಿಸುವುದು ಬಿಜೆಪಿಯ ಆಡಳಿತ ವೈಖರಿ.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾರ್ಯಗತಗೊಳಿಸಲು ಯೋಜಿಸಿದ್ದ ಎಲ್ಲಾ ಜನಪರ ಯೋಜನೆಗಳಾದ ಆಧಾರ್, ಜಿ.ಎಸ್.ಟಿ.ಗಳನ್ನು ಅಂದು ವಿರೋಧಿಸಿ ಈಗ ಕಾರ್ಯಗತಗೊಳಿಸಿ ತನ್ನ ಸಾಧನೆಯೆಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಸ್ವಂತಿಕೆಯೇ ಇಲ್ಲದ ಬಿಜೆಪಿ ಸದಾ ಧರ್ಮ ಹಾಗೂ ಅತೀ ಸೂಕ್ಷ್ಮ ವಿಷಯಗಳನ್ನು ಮುನ್ನಲೆಗೆ ತಂದು ತನ್ನ ವೈಫಲ್ಯವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ ಎಂದು ವಿವಾದಾತ್ಮಕ ಮೂಢ ನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ ರಾಜ್ಯ ಸರಕಾರದ ನಿಲುವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಟೀಕಿಸಿದ್ದಾರೆ.