ಮೂಡುಬಿದ್ರೆ: ಮಾಜಿ ಸಚಿವ,ಜೆಡಿಎಸ್ ನಾಯಕ ಕೆ.ಅಮರನಾಥ ಶೆಟ್ಟಿ ಇನ್ನಿಲ್ಲ
ಮೂಡುಬಿದ್ರೆ: ಜೆಡಿಎಸ್ ನಾಯಕ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ (80) ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಮರನಾಥ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನ ರಾಗಿದ್ದಾರೆ.
1965ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಅವರು, ಕಾರ್ಕಳ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ನಂತರ ಮೂಡಬಿದಿರೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾರ್ಕಳ ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷ, ಸಹಕಾರಿ ಸೇವಾ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು .
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ 1983, 1987 ಮತ್ತು 1994 ಹೀಗೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಪ್ರವಾಸೋದ್ಯಮ ಮತ್ತು ಮುಜರಾಯಿ ಸಚಿವರಾಗಿದ್ದರು. ಅಭಯಚಂದ್ರ ಅವರ ಎದುರು ನಿರಂತರ ಪರಾಭವಗೊಂಡು, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
‘ಮಾಜಿ ಸಚಿವರು ಹಾಗೂ ಮೃದು ಮನಸ್ಸಿನ ಸರಳ ರಾಜಕಾರಣಿಯಾಗಿರುವ ನಮ್ಮ ಪಕ್ಷದ ಹಿರಿಯ ಮುಖಂಡರಾದ ಅಮರನಾಥ ಶೆಟ್ಟಿಯವರು ವಿಧಿವಶರಾಗಿರುವುದು ತೀವ್ರ ದುಃಖ ತಂದಿದೆ’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
‘ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಅಮರನಾಥ ಶೆಟ್ಟಿ ಅವರು ನಮ್ಮನ್ನು ಅಗಲಿದ ವಿಚಾರ ಕೇಳಿ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಭಗವಂತ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಮುಲ್ಕಿ-ಮೂಡಬಿದ್ರೆ ಮಾಜಿ ಶಾಸಕ, ಅಜಾತಶತ್ರು, ರಾಜಕೀಯ ದಿಗ್ಗಜ, ಅವಿಭಜಿತ ದ. ಕ. ಜಿಲ್ಲೆಯಲ್ಲಿ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅವಿಶ್ರಾಂತವಾಗಿ ದುಡಿದು, 3 ಬಾರಿ ಶಾಸಕರಾಗಿ, ರಾಮಕೃಷ್ಣ ಹೆಗ್ಗಡೆ ಮತ್ತು ಜೆ. ಎಚ್. ಪಟೇಲ್ ಅವರ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ದತ್ತಿ ಇಲಾಖೆ, ಮೀನುಗಾರಿಕೆ ಮತ್ತು ಬಂದರು ಸಚಿವರಾಗಿ ಮತ್ತು ದ.ಕ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ರಾಜ್ಯದಲ್ಲಿ ಅತ್ಯತ್ತಮ ಕೆಲಸ ಮಾಡಿ ಜನಪ್ರಿಯರಾಗಿದ್ದ ದ.ಕ ಜಿಲ್ಲೆಯ ಪ್ರಭಾವಿ ರಾಜಕಾರಿಣಿ ಮಾಜಿ ಸಚಿವ ಜೆ.ಡಿ.ಎಸ್. ನಾಯಕ ಕೆ. ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಸರಳ ವ್ಯಕ್ತಿತ್ವದ ನಮ್ಮ ಪಕ್ಷದ ಹಿರಿಯ ನಾಯಕರಾದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಕೆ. ಅಮರನಾಥ ಶೆಟ್ಟಿ ಅವರು ನಮ್ಮನ್ನು ಅಗಲಿದ ವಿಚಾರ ಕೇಳಿ ತೀವ್ರ ದುಃಖವಾಗಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಭಗವಂತ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಯೋಗೀಶ್ ವಿ . ಶೆಟ್ಟಿಯವರು ಸಂತಾಪ ವ್ಯಕ್ತಪಡಿಸಿರುತ್ತಾರೆ.