ದೇವರು ಕೊಟ್ಟ ಮಕ್ಕಳನ್ನು ದೇವರೇ ನೋಡಿಕೊಳ್ಳಲಿ ಎಂದು ದೇವಾಲಯದಲ್ಲಿ ಬಿಡಲು ನಿರ್ಧರಿಸಿದ  ಹೆತ್ತವ್ವ

ಉಡುಪಿ : ಬಡತನ- ನಿರ್ಗತಿಕ ಬದುಕು , ಐದು ಕರುಳ ಕುಡಿಗಳನ್ನು ನೀಡಿ ,ನಾನು ನಿಮ್ಮ ರಕ್ಷಣೆ  ಮಾಡುತ್ತೇನೆ ಎಂದ ಪತಿದೇವ ಮಧುಪಾನದ ದಾಸನಾಗಿ ವೈಕುಂಠ ಯಾತ್ರೆ ಪೂರೈಸಿದ್ದಾನೆ , ಬಿಡದೆ ಭಾದಿಸುವ ಕಾಯಿಲೆ ತನ್ನ ದುಡಿತದ ಶಕ್ತಿಯನ್ನ ಇಂಗಿಸಿದೆ ಎಂದು ತಿಳಿದ ತಾಯಿ ತನ್ನ ಕರುಳ ಬಳ್ಳಿಗಳನ್ನ ಉಡುಪಿ ಕೃಷ್ಣ ಮಠದಲ್ಲಿ ದೇವರೇ ನೋಡಿಕೊಳ್ಳಲಿ ಎಂದು ಬಿಟ್ಟು ಹೋಗುವ ಯತ್ನದಲ್ಲಿರುವಾಗ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು , ತಾರಾನಾಥ್ ಮೇಸ್ತ ಶಿರೂರು ರಕ್ಷಿಸಿದ ಮನಕಲಕುವ ಘಟನೆ ಉಡುಪಿಯಲ್ಲಿ ನಡೆದಿದೆ.
ನಾಗರಿಕ ಸಮಿತಿಯ ಕಾರ್ಯಕರ್ತರ ಸಮಯಪ್ರಜ್ಞೆ, ಕಾನೂನು ಪರಿವಿಕ್ಷಣಾ ಅಧಿಕಾರಿ ಪ್ರಭಾಕರ್ ಆಚಾರ್ಯ, ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಮೋಹನ್ ಕುಮಾರ್ ಅವರ ಕರ್ತವ್ಯ ಪ್ರಜ್ಞೆಯಿಂದ, ಬೀದಿ ಪಾಲಾಗಬೇಕಾದ ಮೂವರು ಹೆಣ್ಣು, ಎರಡು ಗಂಡು ಮಕ್ಕಳು ಸುರಕ್ಷಿತರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳ ರಕ್ಷಣಾ ಕಾರ್ಯಚರಣೆಗೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ರಕ್ಷಿಸಲ್ಪಟ್ಟ ಮಕ್ಕಳು ಸಾವಿತ್ರಿ (10 ವ) ಮಲ್ಲಮ್ಮ(9 ವ) ಎಮ್ಮೂನೂರ್ (5 ವ) ಮರಿಯಮ್ಮ(4 ವ) ಪ್ರಶಾಂತ್ (2 ವ) ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವಿಕ್ಷಣಾ  ಅಧಿಕಾರಿ ಪ್ರಭಾಕರ್ ಆಚಾರ್ಯ ಅವರು ಕಾನೂನು ಪ್ರಕ್ರಿಯೆ ನಡೆಸಿದ ಬಳಿಕ, ಕುಂದಾಪುರದ ನಮ್ಮ ಭೂಮಿ ಸಂಸ್ಥೆಯಲ್ಲಿ ನೆಲೆ ಕಲ್ಪಿಸಿದ್ದಾರೆ. ಹೆತ್ತಬ್ಬೆ ಕರುಳಕುಡಿಗಳ ಸರಕಾರದ ಕಾನೂನು ವ್ಯಾಪ್ತಿಗೆ ನೀಡಿದ ಬಳಿಕ, ತನ್ನ ಮಕ್ಕಳ ಪೋಷಣೆ ಸಮಸ್ಯೆಯಿಂದ ಮುಕ್ತಳಾದ ಸಂತೋಷದಿಂದ ತನ್ನೂರು ಬಾಗಲಕೋಟೆಗೆ ಹೋಗುತ್ತೆನೆಂದು ಹೇಳಿ ತೆರಳಿದ್ದಾಳೆ.
ಮಹಿಳೆಯನ್ನು ದ್ಯಾಮವ್ವ (32ವ) ಗಂಡ ಹುಲಗಪ್ಪ ಮಾದರ, ಚಿತ್ತವಾಡಗಿ ಬಾಗಲಕೋಟೆ ಜಿಲ್ಲೆಯವಳೆಂದು ಗುರತಿಸಲಾಗಿದೆ. ಐದು ಮಕ್ಕಳ ಹುಟ್ಟಿಗೆ ಕಾರಣನಾದ ಮಹಿಳೆಯ ಗಂಡ ಹುಲಗಪ್ಪ ಮಾದರನು, ಅತಿಯಾದ ಕುಡಿತದ ಚಟದ ಕಾರಣದಿಂದ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮಹಿಳೆ ಹೇಳಿಕೊಂಡಿದ್ದಾಳೆ. ಮರಣ ಪೂರ್ವದಲ್ಲಿ ಹೊಲಗದ್ದೆ ಆಸ್ತಿ ಎಲ್ಲಾವನ್ನು ತನ್ನ ಕುಡಿತದ ಚಟಕ್ಕಾಗಿ ಮಾರಟ ಮಾಡಿದ್ದು, ನಿಲ್ಲಲು ಸೂರಿಲ್ಲದಂತೆ ಮಾಡಿದ್ದಾನೆ. ತನಗೆ ಅನಾರೋಗ್ಯ, ಕೂಲಿ ಮಾಡಿ ಐವರು ಮಕ್ಕಳು ಸಾಕುವುದು ತುಂಬ ಕಷ್ಟವಾಯಿತು. ಹಾಗಾಗಿ ಮಕ್ಕಳನ್ನು ದೇವರೇ ರಕ್ಷಿಸಲೆಂದು ಶ್ರೀಕೃಷ್ಣಮಠದ ವಠಾರದಲ್ಲಿ ತ್ಯಜಿಸುವ ನಿರ್ಧಾರ ಮಾಡಿದ್ದೆ, ಎಂದು ದ್ಯಾಮವ್ವ ತನ್ನ ಅಳಲನ್ನು ಸಮಿತಿಯ ಕಾರ್ಯಕರ್ತರಲ್ಲಿ ಹೇಳಿಕೊಂಡಿದ್ದಾಳೆ .
ಮಹಿಳೆ ತನ್ನ ಐವರು ಸಣ್ಣ ಮಕ್ಕಳನ್ನು ತನ್ನೂರಿಂದ ಕರೆದುಕೊಂಡು ಬಂದು ಬ್ರಹ್ಮಾವರದ ಆಕಾಶವಾಣಿ ಬಳಿ ಮುಸ್ಲಿಂ ಧರ್ಮಿಯರ  ಮನೆಯಲ್ಲಿ ಕೆಲವು ತಿಂಗಳುಗಳಿಂದ ಕೆಲಸ  ಮಾಡಿಕೊಂಡಿದ್ದಳು ಎಂಬ ಮಾಹಿತಿಯೂ ಲಭ್ಯವಾಗಿದೆ. ಇರ್ವರೂ ಮಕ್ಕಳು ಶಾಲೆ ಸೆರ್ಪಡೆಗೆ ಸೂಕ್ತ ವಯಸ್ಕರಾಗಿದ್ದರು. ಆದರೆ ಬಡತನದ ಕಾರಣದಿಂದ ಮಕ್ಕಳು ಶಾಲಾ ಮೆಟ್ಟಿಲು ಹತ್ತಲಾಗದೆ ಶಿಕ್ಷಣದಿಂದ ವಂಚಿತರಾಗಿದ್ದರು. ಒಟ್ಟಿನಲ್ಲಿ ಈಗ ಮಕ್ಕಳಿಗೆ ಒಂದು ಆಶ್ರಯ ಸಿಕ್ಕಿದೆ . ತಾಯಿಗೂ  ನೆಮ್ಮದಿಯ ನಿಟ್ಟುಸಿರು…

Leave a Reply

Your email address will not be published. Required fields are marked *

error: Content is protected !!