ಮೊಬೈಲ್, ಇಂಟರ್ನೆಟ್, ಟಿವಿ, ದೂರವಾಣಿ ಸೇವೆ ಬಂದ್; ಏನಾಗ್ತಿದೆ ಕಾಶ್ಮೀರದಲ್ಲಿ..?
ಕಳೆದ ಒಂದು ವಾರದ ಅಂತರದಲ್ಲಿ ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ಸುಮಾರು 38 ಸಾವಿರ ಹೆಚ್ಚುವರಿ ಸೈನಿಕರನ್ನು ರವಾನೆ ಮಾಡಿದೆ. ಇದಕ್ಕಾಗಿ ಸಿ-17 ಹರ್ಕ್ಯುಲಸ್ ವಿಮಾನದ ಬಳಕೆ ಮಾಡಿ ಸೈನಿಕರನ್ನು ಕಾಶ್ಮೀರಕ್ಕೆ ರವಾನೆ ಮಾಡಿದೆ. ಈ ನಡುವೆ ಭಾನುವಾರ ತಡರಾತ್ರಿ ಕಣಿವೆ ರಾಜ್ಯದಲ್ಲಿ ಹೈಡ್ರಾಮಾ ನಡೆದಿದ್ದು, ರಾತ್ರೋ ರಾತ್ರಿ ರಾಜಧಾನಿ ಶ್ರಿನಗರ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಮೊಬೈಲ್ ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಾನುವಾರ ರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ. ಯಾವುದೇ ವದಂತಿ ಹಬ್ಬದಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಹಿರಿಯ ಅಧಿಕಾರಿಗಳಿಗೆ ಸ್ಯಾಟಲೈಟ್ ಫೋನ್ಗಳನ್ನು ನೀಡಲಾಗಿದೆ. ಜೊತೆಗೆ ಸಾರ್ವಜನಿಕ ಸಮಾರಂಭಗಳ ಮೇಲೆ ಸರ್ಕಾರ ನಿಷೇಧ ಹೇರಿ ಆದೇಶ ಹೊರಡಿಸಿದೆ. ಅಲ್ಲದೆ ಒಮರ್ ಅಬ್ದುಲ್ಲಾ, ಮುಫ್ತಿ ಮೆಹಬೂಬಾ ಸೇರಿದಂತೆ ಹಲವು ರಾಜಕೀಯ ನಾಯಕರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿದೆ.
ಮಧ್ಯರಾತ್ರಿ ಸಭೆ ನಡೆಸಿದ ರಾಜ್ಯಪಾಲರು
ಆದಷ್ಟು ಬೇಗ ಯಾತ್ರಿಗಳು ಹಾಗೂ ಪ್ರವಾಸಿಗಳು ಕಣಿವೆ ಬಿಟ್ಟು ಮರಳಬೇಕು ಎಂದು ಜಮ್ಮು ಕಾಶ್ಮೀರ ಸರ್ಕಾರ ಹೇಳಿದೆ. ಜಮ್ಮು- ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಯಾದ ಬೆನ್ನಲ್ಲೇ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಭಾನುವಾರ ಮಧ್ಯರಾತ್ರಿ ಭದ್ರತಾ ಕಾರ್ಯದರ್ಶಿ, ಡಿಜಿಪಿ ಹಾಗೂ ಐಜಿಪಿಗಳ ಸಭೆ ಕರೆದು ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳು ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆ ಹುಟ್ಟುಹಾಕಿದ್ದು, ಇದಕ್ಕೆ ಹತ್ತಾರು ಊಹಾಪೋಹಗಳೂ ಕೂಡ ಹರಿದಾಡುತ್ತಿವೆ. ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ರದ್ದುಗೊಳಿಸಬಹುದು, ಸ್ಥಿರಾಸ್ತಿ ಖರೀದಿ ಹಕ್ಕನ್ನು ದೇಶದ ಉಳಿದ ಭಾಗದ ಜನರಿಗೂ ನೀಡಲು 35ಎ ಕೈಬಿಡಬಹುದು, ಈ ಬಾರಿ ಕಾಶ್ಮೀರದಲ್ಲೇ ಮೋದಿ ಧ್ವಜಾರೋಹಣ ಮಾಡಬಹುದು, ಉಗ್ರರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಆಪರೇಷನ್ ಆರಂಭವಾಗಬಹುದು ಎಂಬೆಲ್ಲಾ ವಾದಗಳು ಕೇಳಿಬರುತ್ತಿವೆ.
ಒಟ್ಟಾರೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಡೆ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.