ಉಡುಪಿ ಬೆಡಗಿಗೆ “ಮಿಸ್ ದಿವಾ ಯೂನಿವರ್ಸ್ 2020” ಕಿರೀಟ
ಮುಂಬೈ : ಉಡುಪಿ ಮೂಲದ ಬೆಡಗಿ ಎಡ್ಲಿನ್ ಕಾಸ್ತೆಲಿನೋ ‘ಲಿವಾ ಮಿಸ್ ದಿವಾ ಯೂನಿವರ್ಸ್ 2020’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮುಂಬಯಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಎಡ್ಲಿನ್ ಕಾಸ್ತಲಿನೊ ಅವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು, ಅವರಿಗೆ ಹಿಂದಿನ ಆವೃತ್ತಿಯ ವಿಜೇತೆ ವರ್ತಿಕಾ ಸಿಂಗ್ ‘ಮಿಸ್ ದಿವಾ ಯುನಿವರ್ಸ್ ಯೂನಿವರ್ಸ್ 2020’ ಕಿರೀಟ ತೊಡಿಸಿದರು.
ಎಡ್ಲಿನ್ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಎರಡನೇ ಸ್ಥಾನ ಗಳಿಸಿದ ಜಬಲ್ಪುರದ ಆವೃತಿ ಚೌಧರಿ ಮಿಸ್ ದಿವಾ ಸುಪ್ರನ್ಯಾಷನಲ್ ಹಾಗೂ ಪುಣೆಯ ನೇಹಾ ಜೈಸ್ವಾಲ್ ಮಿಸ್ ದಿವಾ ರನ್ನರ್ ಆಪ್ ಕಿರೀಟಕ್ಕೆ ಭಾಜನರಾಗಿದ್ದಾರೆ. ಈ ಪೈಕಿ ಆವೃತಿ ಅವರು ಮಿಸ್ ಸುಪ್ರನ್ಯಾಷನಲ್ ಪೇಜೆಂಟ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಲಿವಾ ಮಿಸ್ ದಿವಾ ಯುನಿವರ್ಸ್ ಸ್ಪರ್ಧೆಯ ತೀರ್ಪುಗಾರರಾಗಿ ಮಾಜಿ ಭುವನ ಸುಂದರಿ ಬಾಲಿವುಡ್ ನಟಿ ಲಾರಾ ದತ್ತ, ಆಶಾ ಭಟ್, ವಿನ್ಯಾಸಗಾರರಾದ ಶಿವನ್ ಭಾಟಿಯಾ, ನರೇಶ್ ಕುಕ್ರೇಜಾ, ನಿಖಿಲ್ ಮೆಹ್ರಾ, ನಟರಾದ ಯಮಿ ಗೌತಮ್, ಆದಿತ್ಯ ರಾಯ್ ಕಪೂರ್ ಮತ್ತು ಅನಿಲ್ ಕಪೂರ್ ಭಾಗವಹಿಸಿದ್ದರು. ಎಡ್ಲಿನ್ ಕಾಸ್ತೆಲಿನೋ ಉಡುಪಿ ಜಿಲ್ಲೆಯ ಕೊರಂಗ್ರಪಾಡಿ ನಿವಾಸಿ. ಅಲ್ಫೋನ್ಸಸ್ ಕಾಸ್ತೆಲಿನೋ ಮತ್ತು ಮೀರಾ ಕಾಸ್ತೆಲಿನೋ ದಂಪತಿಯ ಪುತ್ರಿಯಾಗಿರುವ ಯೆಡ್ಲಿನ್ ಮೂಲತಃ ಉಡುಪಿಯ ಕೊರಂಗ್ರಪಾಡಿಯವರು. ಮುಂಬಯಿಯಲ್ಲಿ ನೆಲೆಸಿರುವ ಇವರು ಪ್ರಸ್ತುತ ಕುವೈಟ್ನಲ್ಲಿ ನೆಲೆಸಿದ್ದಾರೆ.
1998ರಲ್ಲಿ ಹುಟ್ಟಿದ ಅವರು 15ನೇ ವಯಸ್ಸಿನಲ್ಲಿ ಮುಂಬಯಿಗೆ ತೆರಳಿ ಸಂತ ಫ್ರಾನ್ಸಿಸ್ ಜೇವಿಯರ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣವನ್ನು ಮತ್ತು ಪದವಿಯನ್ನು ಪಡೆದರು. ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದ ಅವರು ಅದೇ ಕ್ಷೇತ್ರದ ವಿಎಸ್ಪಿ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದು, ನಟನೆ ಕೊರಿಯೊಗ್ರಾಫಿ ಅವರ ಆಸಕ್ತಿ ಕ್ಷೇತ್ರಗಳು. ಮುಂಬಯಿ ನಗರದಲ್ಲಿ ನಡೆದ ಟಿಜಿಪಿಸಿ ಸಹಿತ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಡ್ಲಿನ್ ಕಾಸ್ತಲಿನೊ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.