ಇನ್ನು15 ದಿನ ಲಾಕ್ ಡೌನ್ ವಿಸ್ತರಣೆಗೆ ಸಚಿವರ ಒಲವು, ಪ್ರಧಾನಿ ಜತೆ ಚರ್ಚೆ ನಂತರ ತೀರ್ಮಾನ: ಯಡಿಯೂರಪ್ಪ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಇನ್ನು 15 ದಿನ ಲಾಕ್ ಡೌನ್ ವಿಸ್ತರಣೆ ಒಳಿತು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುವ ನಿರ್ಧಾರದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೆ 14ರ ಬಳಿಕ ರಾಜ್ಯದ್ಯಂತ ಲೌಕ್ ಡೌನ್ ಮುಂದುವರೆಸಬೇಕಾ ಅಥವಾ ಕೊರೊನಾ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಮುಂದುವರೆಸಬೇಕಾ ಎಂಬ ಬಗ್ಗೆ ಮುಖ್ಯಮಂತ್ರಿ ಸಚಿವರೊಂದಿಗೆ ಚರ್ಚೆ ನಡೆಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪರೋಕ್ಷವಾಗಿ ಲಾಕ್ ಡೌನ್ ವಿಸ್ತರಣೆ ಸುಳಿವು ನೀಡಿದರು.
ಲಾಕ್ ಡೌನ್ ಒಂದು ಹಂತಕ್ಕೆ ಬರಬೇಕಾದರೆ ಏ.14ರವರೆಗೆ ಜನತೆ ಯಾರೂ ಮನೆಯಿಂದ ಹೊರಬರಬೇಡಿ ಎಂದು ಸಿಎಂ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಮಾರಕ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನು ಕನಿಷ್ಟ 15 ದಿನಗಳವರೆಗೆ ಲಾಕ್ ಡೌನ್ ವಿಸ್ತರಿಸಿದರೆ ಒಳಿತು ಎಂಬುದಾಹಗಿ ಹಲವು ಸಚಿವರು ಯಡಿಯೂರಪ್ಪ ಅವರಿಗೆ ಸಲಹೆ ಕೊಟ್ಟಿದ್ದಾರೆ.
ಇದೆ ಏಪ್ರಿಲ್ 11ರಂದು ಪ್ರಧಾನಿ ಜೊತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಲಿದ್ದು, ಈ ವೇಳೆ ಪ್ರಧಾನಿ ಯಾವ ನಿರ್ಧಾರ ಕೈಗೊಳ್ಳುತ್ತಾರೆಯೋ ಅದರ ಬಳಿಕ ರಾಜ್ಯದಲ್ಲಿ ಮುಂದೇನು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಹೀಗಾಗಿ ಎರಡು ತಿಂಗಳವರೆಗೆ ಪಡಿತರ ವಿತರಿಸುವಂತೆ ಸೂಚಿಸಲಾಗಿದೆ ಎಂದರು.
ಕಾನೂನು ಮತ್ತು ಸಂಸದೀ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರು, ಸಚಿವರ ಸಂಬಳದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಿ 15.36 ಕೋಟಿಯಷ್ಟು ಹಣವನ್ನು ಕೊವಿಡ್-19 ಪರಿಹಾರ ನಿಧಿಗೆ ವರ್ಗಾಯಿಸಲು ಸುಗ್ರೀವಾಜ್ಞೆ ಮೂಲಕ ಆದೇಶ ಹೊರಡಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಇಂದು ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಜಿಎಸ್ ಟಿ ತೆರಿಗೆ ಪಾವತಿಗೆ ಜೂನ್ ತಿಂಗಳವರೆಗೆ ಕಾಲಾವಕಾಶ, ಕುಡಿಯುವ ನೀರಿಗಾಗಿ 49 ಬರಪೀಡಿತ ತಾಲೂಕುಗಳಿಗೆ ತಲಾ 1ಕೋಟಿ ಹಾಗೂ ಗ್ರಾಮೀಣ ಪಟ್ಟಣ ಪಂಚಾಯಿತಿಗಳಿಗೆ 50 ಲಕ್ಷ ರೂ ಬಿಡುಗಡೆ ಸೇರಿದಂತೆ ಇನ್ನು ಕೆಲವು ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದರು.
94 ಎ ಅಡಿ ಭೂಮಿ ಅಕ್ರಮ ಸಕ್ರಮ ಅರ್ಜಿ ಇತ್ಯರ್ಥ ಆಗುವ ತನಕ ಪ್ರಕರಣ ದಾಖಲಿಸದಿರಲು ಸಂಪುಟ ತೀರ್ಮಾನಿಸಿರುವುದಾಗಿ ಸಚಿವರು ತಿಳಿಸಿದರು.