ಹೆರ್ಗ: 460 ಮನೆಗಳಿಗೆ ಶಂಕುಸ್ಥಾಪನೆ
ಉಡುಪಿ – ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಉಡುಪಿ ನಗರಸಭೆಯ ಸಹಕಾರದೊಂದಿಗೆ ಉಡುಪಿ ನಗರಸಭೆಯ ವ್ಯಾಪ್ತಿಯ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ಇದರ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ 460 ಮನೆಗಳ ಶಂಕುಸ್ಥಾಪನೆಯನ್ನು ಮಾನ್ಯ ವಸತಿ ಸಚಿವರಾದ ವಿ.ಸೋಮಣ್ಣರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಶಾಸಕರಾದ ಕೆ ರಘುಪತಿ ಭಟ್ ಇವರು ಮಾನ್ಯ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಇಂತಹ ವಿನೂತನ ಯೋಜನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ತರಿಸುವಲ್ಲಿ ಸಹಕರಿಸಿದ ಸಚಿವರಿಗೆ, ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರಿಗೆ, ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಹಾಗೂ ವಸತಿ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರಿಗೆ ಶಾಸಕರು ಧನ್ಯವಾದಗಳನ್ನು ಅರ್ಪಿಸಿದರು.
ನಂತರ ಮಾತನಾಡಿದ ಸಚಿವರಾದ ವಿ.ಸೋಮಣ್ಣರವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ಸರ್ವರಿಗೂ ಸೂರು ಎಂಬ ಧ್ಯೇಯವನ್ನು ನಮ್ಮ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಆಸಕ್ತಿ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಯಾರೂ ಮನೆಯಿಲ್ಲದೆ ಇರಬಾರದು ಇದು ನಮ್ಮ ಸರ್ಕಾರದ ಗುರಿ. ಈ ಬಗ್ಗೆ ಕೆಲಸ ಮಾಡುತ್ತಿರುವ ಶಾಸಕರಾದ ರಘುಪತಿ ಭಟ್ ಇವರಿಗೆ ಅಭಿನಂದನೆಗಳು. ಮುಂದೆ ಎಷ್ಟು ಮನೆ ಅಗತ್ಯಗಳಿವೆಯೋ ಅಷ್ಟು ಮನೆಗಳಿಗೆ ಬೇಕಾಗುವ ಹಣಕಾಸಿನ ನೆರವು ಮಾಡಿಕೊಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ, ಜಿಲ್ಲಾಧಿಕಾರಿ ಜಿ ಜಗದೀಶ್, ನಗರಸಭಾ ಪೌರಾಯುಕ್ತರಾದ ಆನಂದ್ ಸಿ ಕಲ್ಲೋಳಿಕರ್ ಸಹಿತ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.