ಮೈಕ್ರೋ ಫೈನಾನ್ಸ್‌ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಕೆಲಸ ಆಗಬೇಕು: ಸೊರಕೆ

ಉಡುಪಿ: ಬಡವರ ರಕ್ತ ಹೀರುತ್ತಿದೆ ಮೈಕ್ರೋಫೈನಾನ್ಸ್‌ಗಳು ಕೊಟ್ಟಂತಹ ಸಾಲಕ್ಕೆ ಶೇ. 30ರಿಂದ 40ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದು, ಆ ಮೂಲಕ ಬಡವರ ರಕ್ತ ಹೀರುತ್ತಿವೆ. ಸಾಲ ವಸೂಲಾತಿ ನೆಪದಲ್ಲಿ ಬಡವರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಹಾಗಾಗಿ ಮೈಕ್ರೋಫೈನಾನ್ಸ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಅದರ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಕೆಲಸ ಆಗಬೇಕು ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.


ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಮತ್ತು ಉಡುಪಿ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯು ರಾಜ್ಯ ದಲಿತ ಸಂಘರ್ಷ ಸಮಿತಿ, ಭೀಮಘರ್ಜನೆ ರಾಜ್ಯ ಸಮಿತಿ ಹಾಗೂ ಅಂಬೇಡ್ಕರ್‌ ಸೇನೆಯ ಸಹಭಾಗಿತ್ವದಲ್ಲಿ ಉಡುಪಿ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಮೈಕ್ರೋಫೈನಾನ್ಸ್‌ಗಳ ದಬ್ಬಾಳಿಕೆ, ದೌರ್ಜನ್ಯ ವಿರುದ್ಧ ಸಾಲ ಸಂತ್ರಸ್ತ ಬಡಮಹಿಳೆಯರ ಬೃಹತ್‌ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಮೈಕ್ರೋಫೈನಾನ್ಸ್‌ಗಳು ಸಾಲ ವಸೂಲಾತಿ ನೆಪದಲ್ಲಿ ಬಡವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಎಸಗುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಬಡ ಕುಟುಂಬಗಳ ಸಾಲಮನ್ನಾ ಮಾಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.


ಹಿಂದಿನ ಮೈತ್ರಿ ಸರ್ಕಾರವು ಮೈಕ್ರೋಫೈನಾನ್ಸ್‌ಗಳ ಸಾಲದ ಹಾವಳಿಯಿಂದ ಬಡವರನ್ನು
ಋಣಮುಕ್ತರಾಗಿಸಲು ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೆ ಅದನ್ನು
ದುರುದ್ದೇಶದಿಂದ ದುರ್ಬಲಗೊಳಿಸಿ, ಜನರನ್ನು ಇನ್ನಷ್ಟು ಆರ್ಥಿಕವಾಗಿ ಹಿಮ್ಮೆಟ್ಟಿಸುವ
ಕೆಲಸವಾಗುತ್ತಿದೆ ಎಂದು ದೂರಿದರು. ಕರ್ನಾಟಕ ದಲಿತ ಸಂಘರ್ಷ (ಭೀಮಘರ್ಜನೆ) ರಾಜ್ಯ ಸಮಿತಿ ಅಧ್ಯಕ್ಷ ಉದಯ ಕುಮಾರ್‌ ತಲ್ಲೂರು ಮಾತನಾಡಿ, ಮೈಕ್ರೋಫೈನಾನ್ಸ್‌ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಾಲ ನೀಡಿದ್ದು, ಸಾಲ ವಸೂಲಾತಿಯೂ ಕಾನೂನು ಬದ್ಧವಾಗಿಲ್ಲ. ಜನರನ್ನು ಬೆದರಿಸುವ ಮೂಲಕ ಸಾಲ ವಸೂಲಾತಿಗೆ ಇಳಿದಿವೆ ಎಂದು ಆರೋಪಿಸಿದರು.

ಕಾರ್ಮಿಕ ಸಂಘಟನೆಗಳ ರಾಜ್ಯ ನಾಯಕಿ ರಾಧ ಸುಂದರೇಶ್‌ ಮಾತನಾಡಿ, ಸರ್ಕಾರ ಕಾರ್ಪೋರೇಟ್‌ ವಲಯಕ್ಕೆ ಸಾಲದ ಸಬ್ಸಿಡಿ ನೀಡುತ್ತಿದ್ದು, ಬಡವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹಾಗಾಗಿ ಪ್ರತಿಭಟನೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಲಕ ಸಾಲಮನ್ನಾ ಮಾಡುವಂತೆ ಸರ್ಕಾರಕ್ಕೆ ಆಗ್ರಹ ಮಾಡಬೇಕಿದೆ ಎಂದರು.

ಜಿಲ್ಲೆ ಋಣಮುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್‌ ಬೈಲೂರು, ಅಂಬೇಡ್ಕರ್‌ ಸೇನೆ ರಾಜ್ಯಾಧ್ಯಕ್ಷ ಪಿ. ಮೂರ್ತಿ, ಋಣಮುಕ್ತ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ಬಿ.ಎಂ. ಭಟ್‌, ದಕ್ಷಿಣ ಕನ್ನಡ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ಸಂಚಾಲಕ ಎಲ್‌. ಮಂಜುನಾಥ್‌, ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುನಿಲ್‌ ಹೆಗ್ಡೆ, ಉಡುಪಿ ತಾಲ್ಲೂಕು ಅಧ್ಯಕ್ಷ ಸೋಮನಾಥ್‌, ಜಿಲ್ಲಾ ಮಹಿಳಾ ಸಮಿತಿ ಪ್ರಧಾನ ಸಂಚಾಲಕಿ ಮಮತಾ ಆರ್‌. ಪಡುಬೆಳ್ಳೆ, ತಾಲ್ಲೂಕು ಅಧ್ಯಕ್ಷರಾದ ಅನಿತಾ, ರಾಣಿ ಪ್ರದೀಪ್‌, ಸಮಿತಿ ಪ್ರಮುಖರಾದ ಲಿಲ್ಲಿ, ಉಮೇಶ್‌, ನಾಗರಾಜ್‌, ಶಶಿಧರ ಮುಲ್ಕಿ, ಭಾಗ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!