ಉಡುಪಿ ಆಟೋ ಪ್ರಯಾಣಕ್ಕೆ ಮೀಟರ್ ಕಡ್ಡಾಯ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯ ಆಟೋ ಪ್ರಯಾಣ ದರ ಪರಿಷ್ಕರಣೆ ಕುರಿತಂತೆ ಈಗಿನ ಕನಿಷ್ಠ ದರ
ರೂ.25 ರಿಂದ ದರವನ್ನು ರೂ.30 ಕ್ಕೆ ಹೆಚ್ಚಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದು, ಹೆಚ್ಚಳವಾದ ದರ ಏಪ್ರಿಲ್ 1 ರಿಂದ ಅನ್ವಯವಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.


ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಆಟೋ ಪ್ರಯಾಣ ದರ ಪರಿಷ್ಕರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 2014 ರಲ್ಲಿ ಆಟೋ ಪ್ರಯಾಣ ಪರಿಷ್ಕರಿಸಿದ ನಂತರ ದರ ಪರಿಷ್ಕರಣೆ ಆಗಿಲ್ಲ , ವಾಹನದ ವಿಮೆ, ಬಿಡಿಭಾಗ ಹೆಚ್ಚಳವಾಗಿದ್ದು , ಆಟೋ ಪ್ರಯಾಣದ ದರವನ್ನು ಹೆಚ್ಚಿಸುವಂತೆ ಆಟೋ ಚಾಲಕ ಸಂಘಟನೆಗಳ ಮುಖಂಡರು ಮತ್ತು ಚಾಲಕರು ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕನಿಷ್ಠ ಪ್ರಯಾಣ ದರವನ್ನು ರೂ.30 ಗಳಿಗೆ ಹೆಚ್ಚಳ ಮಾಡಲು ಒಪ್ಪಿಗೆ
ನೀಡಿದ್ದು, ರನ್ನಿಂಗ್ ದರವನ್ನು 17 ರೂ ಗಳಿಗೆ ನಿಗಧಿಪಡಿಸಿದ್ದು, ಕಡ್ಡಾಯವಾಗಿ ಎಲ್ಲಾ ಆಟೋಗಳಲ್ಲಿ ಮೀಟರ್ ಅಳವಡಿಸಿ, ಆ ಪ್ರಕಾರವೇ ಪ್ರಯಾಣಿಕರಿಂದ ದರ ಪಡೆಯುವಂತೆ ಡಿಸಿ ಜಿ.ಜಗದೀಶ್ ಸೂಚಿಸಿದರು.


ಆಟೋ ಚಾಲಕರು ಸಾರ್ವಜನಿರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ಹಾಗೂ ಕಡ್ಡಾಯವಾಗಿ ಸಂಚಾರಿ ನಿಯಮಗಳ ಪಾಲನೆ ಮಾಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರುದ್ದ
ದಿಕ್ಕಿನಿಂದ ಬರಬೇಡಿ, ಆಟೋಗಳಲ್ಲಿ ನಿಗಧಿತ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಿರಿ, ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಿದರು.


ಆಟೋ ರಿಕ್ಷಾಗಳ ವಲಯ ನಿಗಧಿ ಕುರಿತಂತೆ ಇರುವ ಗೊಂದಲಬಗಳ ಕುರಿತಂತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ಮತ್ತು ವಿವಿಧ ರಿಕ್ಷಾ ಸಂಘಟನಡಗಳ ಮುಖಂಡರು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರವು ದಿನಾಂಕ 01.04.2020ರಿಂದ ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ಸಂಚರಿಸುವ ಆಟೋರಿಕ್ಷಾಗಳಿಗೆ ಈ ಕೆಳಗಿನಂತೆ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ.
1) 1.5 ಕಿ.ಮೀಟರ್‍ವರೆಗೆ ಕನಿಷ್ಟ ದರ ರೂ.30.00
2) ನಂತರದ ಪ್ರತಿ ಕಿ.ಮೀಟರ್‍ಗೆ ದರ ರೂ.17.00

ಆದುದರಿಂದ ಉಡುಪಿ ಜಿಲ್ಲೆಯ ಎಲ್ಲಾ ಅಟೋರಿಕ್ಷಾ ಚಾಲಕ/ಮಾಲಕರು ತಮ್ಮ ಅಟೋರಿಕ್ಷಾಗಳಿಗೆ ಕಾನೂನಿನ ಪ್ರಕಾರ ಅನುಮತಿ ಇರುವ ಫ್ಲಾಗ್ ಮೀಟರ್‍ ಕಡ್ಡಾಯವಾಗಿ ಅಳವಡಿಸಿಕೊಂಡು ಮೇಲಿನ ದರಕ್ಕೆ ಅನುಗುಣವಾಗಿ ಕಾನೂನು
ಮಾಪನ ಶಾಸ್ತ್ರ ಇಲಾಖೆಯಿಂದ ದಿನಾಂಕ 31.03.2020 ರ ಒಳಗೆ ಕಡ್ಡಾಯವಾಗಿ ರಿಕ್ಯಾಲೀಬರೇಷನ್ ಹಾಗೂ ಸೀಲ್ ಮಾಡಿಸಿಕೊಂಡು ದಿನಾಂಕ 01.04.2020 ರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿದ ಮೀಟರ್ ದರವನ್ನು ಪ್ರಯಾಣಿಕರಿಂದ
ಪಡೆಯಲು ಆದೇಶಿಸಲಾಗಿದೆ. ತಪ್ಪಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!