ಕರಾವಳಿ ತೀರ ಪ್ರದೇಶದ ಸುರಕ್ಷತೆಗೆ ಕ್ರಮ: ಬೊಮ್ಮಾಯಿ

ಬಂಟ್ವಾಳ: ಕರಾವಳಿಯ ಭದ್ರತಾ ಪಡೆಯನ್ನು ಬಲವರ್ಧನೆಗೊಳಿಸಿ, ತೀರ ಪ್ರದೇಶದ ಸುರಕ್ಷತೆಗೆ ಗರಿಷ್ಠ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಗುರುವಾರ ಬಂಟ್ವಾಳಕ್ಕಾಗಮಿಸಿದ್ದ ಗೃಹಸಚಿವರು ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾತ್ರಿಪಾಳಯದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳ ಜೊತೆ ಜನರನ್ನೂ ಪಾಲ್ಗೊಳ್ಳುವಂತೆ ಮಾಡುವ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ‌ಎಸ್ಪಿ ಕಛೇರಿ ಸ್ಥಳಾಂತರದ ಬಗ್ಗೆ ಶೀಘ್ರದಲ್ಲೇ ‌ಬೆಂಗಳೂರಿನಲ್ಲಿ ಸಭೆ ನಡೆಸಿ ಸ್ಪಷ್ಟ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ ಅವರು,ಬಂಟ್ವಾಳ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು, ಬಂಟ್ವಾಳ ನಗರ ಹಾಗೂ ಗ್ರಾಮಾಂತರಕ್ಕೆ ಪ್ರತ್ಯೇಕ ವೃತ್ತನಿರೀಕ್ಷಕರನ್ನು ನೇಮಿಸಲಾಗುವುದು, ಈ ಸಂದರ್ಭ ಪೊಲೀಸ್ ಸಿಬ್ಬಂದಿ ಸಂಖ್ಯೆ ಹೆಚ್ಚಳವಾಗಲಿದೆ ಎಂದರು. ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಪೊಲೀಸ್ ವಸತಿಗೃಹವಿದ್ದು, ಶೇ.60ರಷ್ಟು ಇರುವ ಕ್ವಾಟ್ರಸ್ ಗಳ ಸಂಖ್ಯೆಯನ್ನು ಮುಂದಿನ ಮೂರುವರ್ಷಗಳಲ್ಲಿ ಶೇ.80ಕ್ಕೆ ಏರಿಸುವ ಗುರಿ ಇರಿಸಲಾಗಿದೆ ಎಂದು ಅವರು ಹೇಳಿದರಲ್ಲದೆ ಗೃಹರಕ್ಷಕದಳದ ಸಿಬ್ಬಂದಿಗಳಿಗೆ ಸಮರ್ಪಕವಾಗಿ ವೇತನ ಪಾವತಿಯಾಗದ ಬಗ್ಗೆ ಸಂಬಂಧಿಸಿದ ಡಿಜಿ ಅವರ ಗಮನಕ್ಕೆ ತರಲಾಗುವುದು ಎಂದರು.
ಪಶ್ಚಿಮವಲಯದ ಐಜಿಪಿ ಅರುಣ್ ಚಕ್ರವರ್ತಿ, ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್, ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್, ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ, ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ್ ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.


ಶಾಸಕ ಯು.ರಾಜೇಶ್ ನಾಯ್ಕ್ , ಬಂಟ್ವಾಳ ಕೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಸದಸ್ಯ ಗೋವಿಂದ ಪ್ರಭು ,ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್ ಜಿ.ಕೆ. ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ತಾಪಂ.ಸದಸ್ಯ ಪ್ರಭಾಕರಪ್ರಭು, ಪುರುಷೋತ್ತಮ ಶೆಟ್ಟಿ, ಉದಯಕುಮಾರ್ ರಾವ್ ಬಂಟ್ವಾಳ, ರಮಾನಾಥ ರಾಯಿ, ಸುದರ್ಶನ್ ಬಜ ಮೊದಲಾದವರಿದ್ದರು. ಇದಕ್ಕೂಮೊದಲು ಗೃಹಸಚಿವರು ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿದರು.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಗೃಹಸಚಿವರು ಪೊಲೀಸ್ ಪಶ್ಚಿಮವಲಯ ವ್ಯಾಪ್ತಿಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಬಂಟ್ವಾಳ ಪ್ರವಾಸಿಮಂದಿರದಲ್ಲಿ ನಡೆಸಿದರು. ಇದೇ ಮೊದಲಬಾರಿಗೆ ಬಂಟ್ವಾಳಕ್ಕಾಗಮಿಸಿದ ಗೃಹಸಚಿವರನ್ನು ಶಾಸಕ ಯು.ರಾಜೇಶ್ ನಾಯ್ಕ್ ಹಾಗೂ ತಾಲೂಕಾಡಳಿತದ ಪರವಾಗಿ ತಹಸೀಲ್ದಾರ್ ರಶ್ಮೀ ಎಸ್.ಆರ್. ಸ್ವಾಗತಿಸಿದರು. ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್, ಎಸ್ಸೈಗಳಾದ ಚಂದ್ರಶೇಖರ್, ಪ್ರಸನ್ನ ಸಹಿತ ವಿವಿಧ ಠಾಣೆಗಳ ಪೊಲೀಸ್ ಉಪನಿರೀಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!