ಸಾಮೂಹಿಕ ಆತ್ಮಹತ್ಯೆ: ಮನೆಯೊಡತಿಯನ್ನು ರಕ್ಷಿಸಿಲು ಯತ್ನಿಸಿದ ನಾಯಿ

ಬಂಟ್ವಾಳ: ಕುಟುಂಬದ ಯಜಮಾನ ಸಾವನ್ನಪ್ಪಿರುವ ದುಃಖ ಭರಿಸಲಾಗದೆ ಇಡೀ ಕುಟುಂಬವೇ ನದಿಗೆ ಹಾರಿ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ.ಸಿ.ರೋಡಿನ ನೇತ್ರಾವತಿ ಸೇತುವೆ ಬಳಿ ಶನಿವಾರ ರಾತ್ರಿ ನಡೆದಿದೆ.

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕು ಕಡಂಗ ಎಂಬಲ್ಲಿಯ ನಿವಾಸಿಗಳಾದ ಸದ್ಯ ಮೈಸೂರಿನ ಪಿ.ಎಸ್.ನಗರದಲ್ಲಿ ವಾಸ ಮಾಡುತ್ತಿದ್ದ ಕೌಶಿಕ್ ಮಂದಣ್ಣ (22), ಕಲ್ಪಿತಾ ಮಂದಣ್ಣ (20) ನೀರುಪಾಲಾಗಿದ್ದರೆ, ಅವರ ತಾಯಿ ಕವಿತಾ ಮಂದಣ್ಣ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ 10.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತದೇಹಗಳ ಶೋಧ ಕಾರ್ಯವನ್ನು ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯ ಈಜುಪಟುಗಳು ನಡೆಸುತ್ತಿದ್ದಾರೆ.
ಏನಾಯಿತು?
ಕೊಡಗು ಜಿಲ್ಲೆ ವೀರಾಜಪೇಟೆಯ ಬಳ್ಳಚಂಡ ಕುಟುಂಬಸ್ಥರಾದ ಕಡಂಗ ಮೂಲದ ಮೈಸುರು ನಿವಾಸಿ ಕೃಷಿಕ ಕಿಶನ್ ಮಂದಣ್ಣ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಶನಿವಾರ ಅವರ ಮೃತದೇಹ ಮೈಸೂರು ಬಳಿ ಲಭಿಸಿತ್ತು. ಈ ಘಟನೆಯಿಂದ ಆಘಾತಗೊಂಡ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಕೊಂಡುಹೋದ ವೇಳೆ ಕುಟುಂಬ ಮಂಗಳೂರು ಕಡೆಗೆ ಮಾರುತಿ ಇಕೋ ವಾಹನದಲ್ಲಿ ಅಗಮಿಸಿತ್ತು. ಸಂಜೆಯ ವೇಳೇ ಬಿ.ಸಿ.ರೋಡ್ ಆಸುಪಾಸಿನಲ್ಲಿ ತಿರುಗಾಡುತ್ತಿದ್ದ ಕುಟುಂಬ ವಾಹನ ಸಂಚಾರ ವಿರಳವಾದ ಸಂದರ್ಭ, ಸುಮಾರು 10.30ರಿಂದ 10.45ರ ವೇಳೆಗೆ ತಮ್ಮ ಪ್ರೀತಿಯ ನಾಯಿ ಜೊತೆ ನದಿಗೆ ಹಾರಿದ್ದಾರೆ.
ಸ್ಥಳೀಯ ಆಟೊ ಚಾಲಕರೊಬ್ಬರು ಇದನ್ನು ನೋಡಿ, ಸ್ಥಳೀಯರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗೂಡಿನಳಿ ಹಳೇ ಸೇತುವೆ ಬಳಿ ಕವಿತಾ ಮತ್ತು ನಾಯಿಯನ್ನು ರಕ್ಷಿಸಲಾಯಿತಾದರೂ ಮಧ್ಯರಾತ್ರಿ ಕವಿತಾ ಮೃತಪಟ್ಟಿದ್ದಾರೆ. ಉಳಿದಿಬ್ಬರ ಶೋಧ ಕಾರ್ಯ ಭಾನುವಾರ ಬೆಳಗ್ಗೆಯೂ ಮುಂದುವರಿದಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಸ್ಥಳಕ್ಕೆ ಬೇಟಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!