ಐಎಂಎ ಗ್ರೂಪ್‌ನ ಮಾಲೀಕ ಮನ್ಸೂರ್ ಖಾನ್ ವಿಡಿಯೊ ಬಿಡುಗಡೆ- ಶರಣಾಗಲು ಸಿದ್ಧ

ಬೆಂಗಳೂರು: ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಐಎಂಎ ಸಮೂಹ ಕಂಪನಿಗಳ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್‌ನದ್ದು ಎನ್ನಲಾದ ವಿಡಿಯೊ ಬಿಡುಗಡೆಯಾಗಿದೆ. ಅದರಲ್ಲಿ ನಾನು ಶರಣಾಗಲು ಸಿದ್ಧನಿದ್ದೇನೆ. ತನಿಖೆಗೂ ಸಹಕರಿಸುತ್ತೇನೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೇಳಿಕೊಂಡಿದ್ದಾನೆ.

ಐಎಂಎ ಗ್ರೂಪ್‌ನ ಯೂ ಟ್ಯೂಬ್ ಚಾನಲ್‌ಗೆ ಅಪ್‌ಲೋಡ್ ಮಾಡಿರುವ ೧೮ ನಿಮಿಷಗಳ ಈ ವಿಡಿಯೊದಲ್ಲಿ, ಐಎಂಎ ಅವನತಿ ಹಾದಿ ಹಿಡಿಯಲು ಪ್ರಭಾವಿ ವ್ಯಕ್ತಿಗಳು ಕಾರಣರಾಗಿದ್ದಾರೆ. ಅವರ ಹೆಸರನ್ನು ಬಹಿರಂಗಪಡಿಸಿದರೆ, ನನ್ನನ್ನು ಮತ್ತು ಕುಟುಂಬವನ್ನು ಜೀವಂತವಾಗಿರಲು ಬಿಡುವುದಿಲ್ಲ ಎಂದು ಮನ್ಸೂರ್ ಹೇಳಿದ್ದಾನೆ. ಅಷ್ಟೇ ಅಲ್ಲ, ಕೆಲವರು ೧೨ ವರ್ಷಗಳಿಂದ ಐಎಂಎ ಸಂಸ್ಥೆಯನ್ನು ನಷ್ಟಕ್ಕೆ ದೂಡಲು ಷಡ್ಯಂತ್ರ ನಡೆಸಿದ್ದರು ಎಂದು ಆರೋಪಿಸಿದ್ದಾನೆ. ಈ ವಿಡಿಯೊವನ್ನು ಎಲ್ಲಿಂದ ಅಪ್‌ಲೋಡ್ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ದೇಶ ಬಿಟ್ಟು ಹೋಗಲು ಕಾರಣವಾದ ಅಂಶಗಳನ್ನು ವಿವರವಾಗಿ ಬಿಚ್ಚಿಟ್ಟಿದ್ದು, ರಾಜ್ಯಸಭೆ ಮಾಜಿ ಸದಸ್ಯ ಕೆ.ರೆಹಮಾನ್ ಖಾನ್, ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಶರವಣ ಹಾಗೂ ಕೆಲವು ರಿಯಲ್ ಎಸ್ಟೇಟ್ ಡೆವಲಪರ್ಸ್‌ಗಳು, ಚಿಟ್ ಫಂಡ್‌ಗಳ ಮಾಲೀಕರು, ಮೌಲ್ವಿಗಳು ಸಂಚು ರೂಪಿಸಿ ಐಎಂಎ ಕಂಪನಿ ಮುಚ್ಚಲು ಕಾರಣರಾಗಿದ್ದಾರೆ. ಎಲ್ಲರ ಹೆಸರನ್ನು ಪೊಲೀಸರು ಮತ್ತು ನ್ಯಾಯಾಲಯದ ಎದುರು ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದಿದ್ದಾನೆ.

೪೦ ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಗೆ ೧,೫೦೦ ಕೋಟಿಗೂ ಹೆಚ್ಚು ಹಣ ವಂಚಿಸಿದ ಆರೋಪಿ ಮನ್ಸೂರ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಕೈಗೆತ್ತಿಕೊಂಡಿದ್ದು, ಈಗಾಗಲೇ ಐಎಂಎ ಜ್ಯುವೆಲ್ಸ್ ಸೇರಿದಂತೆ ವಿವಿಧ ಕಡೆ ದಾಳಿ ನಡೆಸಿ ಕೋಟ್ಯಂತರ ಮೊತ್ತದ ಚಿನ್ನಾಭರಣ ಜಪ್ತಿ ಮಾಡಿದೆ. ಆಸ್ತಿ ದಾಖಲೆಗಳನ್ನೂ ವಶಪಡಿಸಿಕೊಂಡಿದೆ. ಮನ್ಸೂರ್ ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಕೂಡಾ ಹೊರಡಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿರುವಾಗಲೇ ಈ ವಿಡಿಯೊ ಹೊರಬಂದಿದೆ.

ಈ ಹಿಂದೆ ಒಂದು ಆಡಿಯೊ ಬಿಡುಗಡೆ ಮಾಡಿದ್ದೆ. ಅದರಲ್ಲೂ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದೆ. ನನ್ನ ಕುಟುಂಬದ ಬಗ್ಗೆ ಅದರಲ್ಲಿ ಹೇಳಿಕೊಂಡಿದ್ದೆ. ಇಂದು, ಈ ವಿಡಿಯೊ ಬಿಡುಗಡೆ ಮಾಡುತ್ತಿರುವ ಉದ್ದೇಶವಿಷ್ಟೆ: ಜೂನ್ ೧೪ರಂದು ನಾನು ಭಾರತಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಆದರೆ, ನಾನು ಎಲ್ಲಿದ್ದೆನೊ, ಅಲ್ಲಿಂದ ಮುಂದಕ್ಕೆ ಹೋಗಲು ಅವಕಾಶ ಸಿಗಲಿಲ್ಲ. ಟಿಕೆಟ್ ರದ್ದು ಮಾಡಲಾಗಿತ್ತು. ನಾನು ದೇಶ ಬಿಟ್ಟಿದ್ದು ಮೊದಲ ತಪ್ಪು. ಆದರೆ, ಆಡಳಿತ ಮಂಡಳಿ ಮತ್ತು ನನ್ನ ಸುತ್ತಮುತ್ತ ಇದ್ದವರೇ ನನಗೆ ಕಿರುಕುಳ ನೀಡಿದ್ದಾರೆ. ಹೀಗಾಗಿ ನನ್ನ ಕುಟುಂಬವನ್ನೂ ರಹಸ್ಯವಾಗಿಡಬೇಕಾಯಿತು? ಎಂದು ಮನ್ಸೂರ್ ಹೇಳಿಕೊಂಡಿದ್ದಾನೆ.

ತನ್ನ ಮೊಬೈಲ್ ಸಂಖ್ಯೆಯನ್ನೂ ಆಡಿಯೊದಲ್ಲಿ ಹಂಚಿಕೊಂಡಿರುವ ಮನ್ಸೂರ್, ದೇಶಕ್ಕೆ ವಾಪಸ್ ಆಗುವುದಕ್ಕೂ ಮುನ್ನ ಯಾರನ್ನು ಭೇಟಿ ಮಾಡಿ ಶರಣಾಗಬೇಕು ಎಂಬ ವಿವರಗಳನ್ನು ನನ್ನ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಿ ಎಂದು ನಗರ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಬಳಿ ಮನವಿ ಮಾಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!