ಮಣಿಪಾಲ: ಏ.15 ರವರೆಗೆ ಹೊರರೋಗಿ ವಿಭಾಗದ ಚಿಕಿತ್ಸೆ ಸಂಪೂರ್ಣ ಬಂದ್
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿಯು ಕರೋನಾ ವೈರಸ್ (ಕೋವಿಡ್ – 19) ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಏಪ್ರಿಲ್ 15ರವರೆಗೆ ಹೊರರೋಗಿ ವಿಭಾಗದ ಚಿಕಿತ್ಸೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದಾಗ್ಯೂ, ವೈದ್ಯಕೀಯ ತುರ್ತು ಚಿಕಿತ್ಸೆ ಮತ್ತು ತ್ವರಿತ ಅವಶ್ಯಕ ಚಿಕಿತ್ಸೆಯಲ್ಲಿ ಬದಲಾವಣೆ ಸೂಚಿಸಿದೆ. ಜ್ವರ, ಕೆಮ್ಮು ಮತ್ತು ಇನ್ನಿತರೆ ಅಗತ್ಯ ತಪಾಸಣೆಗೆ ಬರುವ ರೋಗಿಗಳು ನೇರವಾಗಿ ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡತಕ್ಕದ್ದು. ಮುಂದಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಆಸ್ಪತ್ರೆಯ ಸಂಬಂಧಿತ ವಿಭಾಗದಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು. ಕೀಮೋಥೆರಪಿ ಮತ್ತು ರೇಡಿಯೋಥೆರಪಿ ರೋಗಿಗಳು ನೇರವಾಗಿ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಗೆ ಬರತಕ್ಕದ್ದು. ಗರ್ಭಿಣಿ ಸ್ತ್ರೀಯರು ನೇರವಾಗಿ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ಬರತಕ್ಕದ್ದು. ಡಯಾಲಿಸಿಸ್‍ನಲ್ಲಿರುವವರು ನೇರವಾಗಿ ಡಯಾಲಿಸಿಸ್ ಕೇಂದ್ರಕ್ಕೆ ಬರತಕ್ಕದ್ದು. ಪ್ರಯೋಗಾಲಯ ಪರೀಕ್ಷಾ ಸೇವೆಯು ತುರ್ತು ಸಂದರ್ಭಕ್ಕೆ ಮಾತ್ರ ಅನ್ವಯಿಸುವುದು. ಮಕ್ಕಳಿಗೆ ಕೊಡಲಾಗುವ ಲಸಿಕಾ ಸೌಲಭ್ಯ ಕೂಡಾ ಏಪ್ರಿಲ್ 15ರವರೆಗೆ ಇರುವುದಿಲ್ಲ. ಇವೆಲ್ಲರ ಹೊರತಾಗಿ ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ. ವಿಶೇಷ ಪ್ರಕಟಣೆ: 27 ಮಾರ್ಚ್ 2020 ಶುಕ್ರವಾರದಿಂದ ಅನ್ವಯವಾಗುವಂತೆ ಡಾ. ಟಿಎಂಎ ಪೈ ಆಸ್ಪತ್ರೆ, ಉಡುಪಿ ಯಲ್ಲಿ ಎಲ್ಲಾ ಹೊರರೋಗಿ, ಒಳರೋಗಿ ಮತ್ತು ತುರ್ತುಸೇವೆ ವಿಭಾಗವನ್ನು ಮುಚ್ಚಲಾಗುವುದು. ತುರ್ತುಸೇವೆ ಅವಶ್ಯವಿರುವ ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿಯ ಎಲ್ಲಾ ರೋಗಿಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಭೇಟಿ ನೀಡುವಂತೆ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |