ವಿಡಿಯೋ ಮಂಗಳೂರು ಗಲಭೆಯದೋ? ಅಥವಾ ಬೇರೆಡೆಯದೋ?: ಕುಮಾರಸ್ವಾಮಿ
ಬೆಂಗಳೂರು: ಮಂಗಳೂರಿನ ಪ್ರತಿಭಟನೆ ವೇಳೆ ಕಲ್ಲುಗಳನ್ನು ಹೊತ್ತು ತಂದ ವಿಡಿಯೋಗಳನ್ನು ಇಷ್ಟೊಂದು ವಿಳಂಬವಾಗಿ ಬಿಡುಗಡೆಗೊಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಲ್ಲು ತೂರಾಟ ಪ್ರಕರಣದಲ್ಲಿ ಸರ್ಕಾರ ಯಾರನ್ನು ಬಂಧಿಸಿದೆ? ಎಷ್ಟು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದೆ?. ಕಲ್ಲು ತೂರಾಟಕ್ಕೆ ತಂದ ವಾಹನಗಳ ವಿಡಿಯೋ ಮಂಗಳೂರಿನ ಗಲಭೆಯದೋ? ಅಥವಾ ಬೇರೆ ಕಡೆಯದೋ? ಎಂದು ಪ್ರಶ್ನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ಜನ ಸೇರಿದರೂ ಗಲಭೆ ಆಗಲಿಲ್ಲ. ಶಾಂತಿಯುತ ಪ್ರತಿಭಟನೆ ನಡೆಯಿತು. ಆದರೆ ಮಂಗಳೂರಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣವೇನು?. ಮಂಗಳೂರನ್ನು ಕೋಮು ಪ್ರಯೋಗಶಾಲೆ ಮಾಡಿಕೊಂಡಿರುವ ಬಿಜೆಪಿ ಇಬ್ಬರು ಅಮಾಯಕರನ್ನು ಬಲಿ ತೆಗೆದುಕೊಂಡಿದ್ದು ಹೇಗೆ? ಮತ್ತು ಏಕೆ? ದಾಂಧಲೆಕೋರರಿಗೆ ಗುಂಡಿಕ್ಕಿದ್ದೇವೆ ಎನ್ನುವ ರಾಜ್ಯಸರ್ಕಾರ ಅವರಿಗೆ ಪರಿಹಾರ ಏಕೆ ಘೋಷಿಸಿತು? ಎಂದು ಪ್ರಶ್ನಿಸಿದ್ದಾರೆ.
ಹಿಂಸಾತ್ಮಕ ಪ್ರತಿಭಟನೆಗೆ ನನ್ನ ಬೆಂಬಲ ಖಂಡಿತ ಇಲ್ಲ. ಆದರೆ ವಿರೋಧ ಪಕ್ಷದ ಸದಸ್ಯನಾಗಿ ರಾಜ್ಯದ ಕಾನೂನು-ಸುವ್ಯವಸ್ಥೆಗೆ ಭಂಗ ತರುವ ನಿಟ್ಟಿನಲ್ಲಿ ಸರ್ಕಾರ ಮತ್ತು ಪೊಲೀಸರು ಪಿತೂರಿ ನಡೆಸಿದರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.