ಮಂಗಳೂರು: ಭೂಸ್ವಾಧೀನ ಮನೆಬಾಗಿಲಿಗೆ ಪರಿಹಾರ ತಲುಪಿಸಿದ ಕೆಐಎಡಿಬಿ
ಮಂಗಳೂರು: ಸರಕಾರದ ವಿವಿಧ ಯೋಜನೆಗಳಿಗೆ, ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನ ಪ್ರಮುಖವಾಗಿದೆ. ಇದಕ್ಕಾಗಿ ಜಮೀನು ಗುರುತಿಸಿ, ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಪರಿಗಣಿಸಿ, ಅಂತಿಮ ಅಧಿಸೂಚನೆಯಾದ ನಂತರ ಜಮೀನು ಕಳೆದುಕೊಂಡವರಿಗೆ ಪರಿಹಾರ ಮೊತ್ತ ನೀಡುವುದು ಪ್ರಮುಖ ಘಟ್ಟವಾಗಿದೆ. ಹಲವು ಸಂದರ್ಭಗಳಲ್ಲಿ ಸಂತ್ರಸ್ತರು ಪರಿಹಾರಕ್ಕಾಗಿ ವರ್ಷಗಟ್ಟಲೆ ಕಚೇರಿಗಳಿಗೆ ಸುತ್ತಾಡಿ, ನ್ಯಾಯಾಲಯದ ಮೊರೆ ಹೋಗಿ ಹತ್ತಾರು ವರ್ಷಗಳ ವಿಳಂಭವಾಗಿ ಪರಿಹಾರ ದೊರಕುವ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗುತ್ತಿವೆ.
ಆದರೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮಂಗಳೂರು ಕಚೇರಿಯು ಭೂಸ್ವಾಧೀನದಿಂದ ಜಮೀನು ಕಳೆದುಕೊಂಡ ನಿರ್ವಸಿತರಿಗೆ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನೇರವಾಗಿ ಅವರ ಮನೆಬಾಗಿಲಿಗೇ ತೆರಳಿ ಪರಿಹಾರ ಮೊತ್ತವನ್ನು ನೀಡುವ ಮೂಲಕ ಈ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿದೆ. ಎಂ.ಆರ್.ಪಿ.ಎಲ್.4 ನೇ ಹಂತದ ವಿಸ್ತರಣೆ ಯೋಜನೆಗಾಗಿ ಮಂಗಳೂರು ತಾಲೂಕಿನ ಪೆರ್ಮುದೆ, ಕುತ್ತೆತ್ತೂರು, ತೋಕೂರು ಗ್ರಾಮಗಳ 962 ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿದೆ. ಈ ಜಮೀನು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದರೂ, ಜನರು ಪರಿಹಾರ ಪಡೆದುಕೊಳ್ಳುವುದು ಬಾಕಿ ಇತ್ತು. ಇದಕ್ಕಾಗಿ ನಿರ್ವಸಿತರು ಬೈಕಂಪಾಡಿ ಕೆಐಎಡಿಬಿ ಕಚೇರಿಗೆ ಆಗಮಿಸಬೇಕಿತ್ತು.
ಈ ಮಧ್ಯೆ ಕೋವಿಡ್ ಲಾಕ್ ಡೌನ್ ಬಂದ ಹಿನ್ನೆಲೆಯಲ್ಲಿ ಜನರು ಕೆಐಎಡಿಬಿ ಕಚೇರಿಗೆ ಆಗಮಿಸುವುದು ದುಸ್ತರವಾಗಿ ಕಳೆದ ಒಂದೂವರೆ ತಿಂಗಳಿನಿಂದ ಈ ಪರಿಹಾರ ವಿತರಣೆ ಪ್ರಕ್ರಿಯೆ ನೆನಗುದಿಗೆ ಬಿತ್ತು. ಅದರಲ್ಲೂ ಬಹುತೇಕ ಜಮೀನುಗಳ ದಾಖಲೆಗಳು ಕುಟುಂಬದ ಹಿರಿಯ ನಾಗರೀಕರ ಹೆಸರಿನಲ್ಲಿರುವುದರಿಂದ ಪರಿಹಾರ ಪಡೆದುಕೊಳ್ಳಲು ಖುದ್ದು ಅವರೇ ಬರಬೇಕಾಗಿತ್ತು. ಕೋರೋನಾ ಭೀತಿ, ಲಾಕ್ ಡೌನ್‍ನಿಂದ ವಾಹನ ಸಂಚಾರ ನಿರ್ಬಂಧ, ದೈಹಿಕ ಅನಾರೋಗ್ಯ ಮೊದಲಾದ ಸಮಸ್ಯೆಗಳಿಂದ ಇವರು ಬೈಕಂಪಾಡಿಯಲ್ಲಿರುವ ಕೆಐಎಡಿಬಿ ಕಚೇರಿಗೆ ಬಂದು ಪರಿಹಾರ ಪಡೆದುಕೊಳ್ಳುವುದು ದುಸ್ತರವಾಗಿತ್ತು.
ಸಂತ್ರಸ್ತರ ಈ ಕಷ್ಟ ಅರ್ಥೈಸಿಕೊಂಡ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಬಿನೊಯ್ ಪಿ.ಕೆ. ಅವರು ಮನೆಯಿಂದ ಹೊರಗೆ ಬರಲು ಕಷ್ಟವಿರುವ ಹಿರಿಯ ನಾಗರೀಕರು ಹಾಗೂ ದೈಹಿಕ ಅನಾರೋಗ್ಯವುಳ್ಳ ಅರ್ಹ ಸಂತ್ರಸ್ತರ ಪಟ್ಟಿಯನ್ನು ತಯಾರಿಸಲಾಯಿತು. ನಂತರ ಕೆಐಎಡಿಬಿ ಅಧಿಕಾರಿಗಳು ಸಿಬ್ಬಂದಿಗಳ ತಂಡವೇ ಸಂತ್ರಸ್ತರ ಮನೆಗಳಿಗೆ ತೆರಳಿ, ಅಲ್ಲಿಯೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ, ನಿಗದಿತ ಪರಿಹಾರದ ಮೊತ್ತವನ್ನೂ ನೀಡಿದೆ.
ಪೆರ್ಮುದೆ ಗ್ರಾಮದಲ್ಲಿ ಜಮೀನು ಕಳೆದುಕೊಂಡ ನಿವೃತ್ತ ಶಿಕ್ಷಕ ಅಲ್ಫ್ರೆಡ್ ಡಿ ಕುನ್ಹಾ (84) ಅವರು ಗಾಲಿ ಕುರ್ಚಿನಲ್ಲಿಯೇ ಸಂಚರಿಸುತ್ತಿದ್ದು, ಅವರ ಮನೆಗೆ ತೆರಳಿ, ದಾಖಲಾತಿ ಪ್ರಕ್ರಿಯೆ ಮುಗಿಸಿ ಪರಿಹಾರದ ಮೊತ್ತ ಚೆಕ್ ನೀಡಲಾಯಿತು. ಈ ಮೂಲಕ ಸಂತ್ರಸ್ತರಿಗೆ ನೆಮ್ಮದಿಯನ್ನೂ ನೀಡುವಲ್ಲಿ ಕೆಐಎಡಿಬಿ ಅಧಿಕಾರಿಗಳು ಯಶಸ್ವಿಯಾದರು
Strict action should be taken on everyone, DC should take this as a priority. This is the misuse of power and money, also not being responsible and violating government orders during this pandemic