ಮಂಗಳೂರು: ಕೊರೊನಾ ವೈರಸ್ ಸೊಂಕು,ಆರೋಗ್ಯ ಇಲಾಖೆ ಎಚ್ಚರಿಕೆಯ ಸೂಚನೆ

ಮಂಗಳೂರು: ಚೀನಾದ ವುಹಾನ್ ನಗರದಿಂದ ಕೇರಳಕ್ಕೆ ಮರಳಿದ್ದ ಯುವಕನೊರ್ವನಿಗೆ ಕೊರೊನಾ ವೈರಸ್ ಸೊಂಕು ತಗುಲಿದ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿಭಾಗಗಳಲ್ಲಿ ಮಂಗಳೂರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.

ಸೊಂಕಿನ ಬಗ್ಗೆ ಯಾರು ಕೂಡ ಭಯ ಪಡುವ ಅಗತ್ಯವಿಲ್ಲ, ಆದರೆ ಎಚ್ಚರದಿಂದ ಇರಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆ ತಿಳಿಸಿದೆ. ತೀವೃ ಜ್ವರ, ನೆಗಡಿ,ಕೆಮ್ಮು,ಉಸಿರಾಟದ ತೊಂದರೆ, ಭೇದಿಯು ಕೊರೋನ ಸೋಂಕು ತಗಲಿದವರಲ್ಲಿ ಈ ಲಕ್ಷಣ ಕಂಡು ಬರುತ್ತದೆ.

ಸೋಂಕು ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿ ಕೊರೋನಾ ಹರಡುತ್ತದೆ. ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸ್ ಹರಡುತ್ತದೆ. ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯಬೇಕು, ಕೈಗಳನ್ನು ಚೆನ್ನಾಗಿ ಆಗಾಗ ತೊಳೆದು ನೈರ್ಮಲ್ಯದಲ್ಲಿ ಇಟ್ಟುಕೊಳ್ಳಬೇಕು, ಅನಾರೋಗ್ಯ ಹೊಂದಿದ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕದಲ್ಲಿ ಇರಬಾರದೆಂದು ಪ್ರಕಟನೆ ತಿಳಿಸಿದೆ.

ಚೀನಾ ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 213ಕ್ಕೆ ಏರಿಕೆಯಾಗಿ ಭಾರತಕ್ಕೂ ವೈರಸ್ ವ್ಯಾಪಿಸಿರುವ ಹಿನ್ನಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಘಟನೆ ಜಾಗತಿಕ ತುರ್ತು ಘೋಷಿಸಿದೆ.

ನಿನ್ನೆ ಚೀನಾದ ವುಹಾನ್ ನಗರದಿಂದ ಕೇರಳಕ್ಕೆ ಮರಳಿದ್ದ ಒಬ್ಬರಲ್ಲಿ ಈ ರೋಗ ಕಂಡು ಬಂದಿದೆ. ಈ ರೋಗಿಯನ್ನು ಪ್ರತ್ಯೇಕವಾಗಿ ಇಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ .

ಗುರುವಾರದಿಂದಲೇ ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಲ್ಲಿ ಯಾವ ರೀತಿ ಕಟ್ಟೆಚ್ಚರ ವಹಿಸಬೇಕು, ಮುಂದಿನ ಕ್ರಮಗಳ ಕುರಿತು ಸಚಿವೆ ಶೈಲಜಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ


ಕಳಪೆ ಆರೋಗ್ಯ ಸೇವೆ ವ್ಯವಸ್ಥೆಯಿರುವ ದೇಶಗಳಿಗೆ ಸಹ ವೈರಸ್ ಹರಡಬಹುದೆಂದು ನಮಗೆ ತೀವ್ರ ಆತಂಕವಿದೆ. ಇನ್ನಷ್ಟು ಹರಡದಂತೆ ನಾವೆಲ್ಲರೂ ಜೊತೆ ಸೇರಿ ಕೆಲಸ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಘಟನೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.


ಕೊರೊನಾ ವೈರಸ್ 15ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು ಚೀನಾ ದೇಶದೊಂದಿಗೆ ಪ್ರಯಾಣ ಮತ್ತು ವ್ಯಾಪಾರಕ್ಕೆ ಸದ್ಯಕ್ಕೆ ನಿರ್ಬಂಧ ಹೇರಿವೆ. ಆದರೆ ಈ ರೀತಿ ಮಾಡುವುದು ಅನಗತ್ಯ, ಇದರಿಂದ ವೈರಸ್ ತಡೆಯಲು ಸಾಧ್ಯವಿಲ್ಲ. ಎಲ್ಲರೂ ಒಟ್ಟು ಸೇರಿ ಕೆಲಸ ಮಾಡಿದರಷ್ಟೆ ವೈರಸ್ ಹರಡುವುದನ್ನು ಕಡಿಮೆ ಮಾಡಬಹುದು ಎಂದು ಟೆಡ್ರೊಸ್ ಹೇಳಿದ್ದಾರೆ. ಅವರು ಚೀನಾಕ್ಕೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. 

ಈಗಾಗಲೇ ಹಲವು ದೇಶಗಳು ಚೀನಾಕ್ಕೆ ಹೋಗಬೇಡಿ ಎಂದು ತನ್ನ ನಾಗರಿಕರಿಗೆ ಹಲವು ದೇಶಗಳ ಸರ್ಕಾರಗಳು ಒತ್ತಾಯಿಸುತ್ತಿದ್ದು ಚೀನಾದ ಕೇಂದ್ರ ನಗರ ವುಹಾನ್ ನಿಂದ ಪ್ರಯಾಣಿಕರು ತಮ್ಮ ದೇಶಕ್ಕೆ ಪ್ರಯಾಣಿಸುವುದನ್ನು ಸಹ ತಡೆದಿವೆ. ಇಲ್ಲಿಯೇ ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಕಾಣಿಸಿಕೊಂಡು ಜನರು ಮೃತಪಟ್ಟಿರುವುದು.


ಚೀನಾಕ್ಕೆ ಪ್ರಯಾಣಿಸುವ ಏರ್ ಫ್ರಾನ್ಸ್, ಬ್ರಿಟಿಷ್ ಏರ್ ವೇಸ್ ಮತ್ತು ಲುಫ್ತಾನ್ಸ ತಮ್ಮ ಸೇವೆಯನ್ನು ಆ ದೇಶಕ್ಕೆ ತಾತ್ಕಾಲಿಕವಾಗಿ ರದ್ದುಪಡಿಸಿವೆ.ಇಸ್ರೇಲ್, ರಷ್ಯಾ ದೇಶಗಳು ಸಹ ನಾಗರಿಕರ ಪ್ರಯಾಣವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿವೆ. 

Leave a Reply

Your email address will not be published. Required fields are marked *

error: Content is protected !!