ಮಂಗಳೂರು: ಬೋಳೂರು ಮಹಿಳೆಗೆ ಕೊರೋನಾ ಸೋಂಕು ದೃಢ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೋಳೂರಿನ 58 ವಯಸ್ಸಿನ ಮಹಿಳೆಗೆ ಕೊರೋನಾ ಸೋಂಕು ಇರುವುದು ಗಂಟಲು ದ್ರವ ಮಾದರಿ ಪರೀಕ್ಷೆ ವರದಿಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಗುರುವಾರ ಮತ್ತೆ 22 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬುಧವಾರ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12ರವರೆಗೆ ಒಟ್ಟು 22 ಪ್ರಕರಣಗಳು ಬೆಳಕಿಗೆ ಬಂದಿದ್ದು, ಮಹಾಮಾರಿ ವೈರಸ್’ಗೆ ಈ ವರೆಗೂ 21 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 223 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1, ವಿಜಯಪುರ 2, ಬೆಳಗಾವಿ 14, ತುಮಕೂರು 1, ಬೆಂಗಳೂರು ನಗರ 3 ಹಾಗೂ ದಾವಣಗೆರೆಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.