ದಾಮಾಯಣಕ್ಕೆ ಪೋಸ್ಟರ್ ಬರೆದ ಮಲಯಾಳಿ ಕನ್ನಡಿಗ
‘ಏಪ್ರಿಲ್ ಒಂದ’ರಂದು ಬಹು ನಿರೀಕ್ಷಿತ ಕನ್ನಡ ಚಲನಚಿತ್ರ ‘ದಾಮಾಯಣ’ದ ಮೊದಲ ಪೋಸ್ಟರನ್ನು ಖ್ಯಾತ ನಿರ್ದೇಶಕ ರಿಶಭ್ ಶೆಟ್ಟಿಯವರು ಬಿಡುಗಡೆ ಮಾಡಿದ್ದರು. ಪೋಸ್ಟರ್ ದಾಮಾಯಣದ ಕುರಿತು ಬಹಳಷ್ಟು ನಿರೀಕ್ಷೆ ಹುಟ್ಟಿಸಿತ್ತು. ಹೆಸರಿನಂತೆ ಪೋಸ್ಟರಿನಲ್ಲೂ ಹೊಸತನ ಕಾಣುತ್ತಿತ್ತು. ಸಿನಿ ಪ್ರಿಯರ ಹುಬ್ಬೇರಿಸುವಂತೆ ಮಾಡಿದ್ದ ಆ ಪೋಸ್ಟರ್- ಕಥೆಯ ಕುರಿತು ಕೆಲವು ಸುಳಿವು ನೀಡುತ್ತಿತ್ತು. ಸಂಕಟದಿಂದ ನಿಂತಿರುವ ದಾಮೋದರನ ಪ್ರಯಾಣ ಈ ಪೋಸ್ಟರ್ನಲ್ಲಿ ಕುತೂಹಲ ಮೂಡಿಸುವಂತ್ತಿತ್ತು.
ಕಥೆಯೇ ಮುಖ್ಯವಾಗಿರುವ ದಾಮಾಯಣ ಚಲನಚಿತ್ರಕ್ಕೆ ಪೋಸ್ಟರ್ ಮುಖಪುಟವಿದ್ದಂತೆ. ಅಪರೂಪದ ಕಥೆಗೆ ಕ್ರೀಯಾಶೀಲ ಪೊಸ್ಟರ್ ರೂಪ ಕೊಡುವಲ್ಲಿ ಯಶಸ್ವಿಯಾದವರು ‘ಕ್ರಿಯೇಟಿವ್ ಕ್ರೂ’ನ ‘ಆದರ್ಶ್ ಮೋಹನ್ದಾಸ್’ರವರು. ಮೂಲತಃ ಕೇರಳದವರಾದ ಆದರ್ಶ್- ಕನ್ನಡದ ಹಲವಾರು ಚಲನಚಿತ್ರಗಳಿಗೆ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ಲೂಸಿಯಾ, ಯೂ-ಟರ್ನ್, ಒಂದು ಮೊಟ್ಟೆಯ ಕಥೆ, ಸರಕಾರಿ ಹಿರಿಂiÀi ಪ್ರಾಥಮಿಕ ಶಾಲೆ ಕಾಸರಗೋಡು, ಉಳಿದವರು ಕಂಡಂತೆ ಇವರು ಪೊಸ್ಟರ್ ವಿನ್ಯಾಸ ಮಾಡಿದ ಕೆಲವು ಯಶಸ್ವೀ ಚಲನಚಿತ್ರಗಳು.
ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ‘ಕ್ರೀಯೇಟಿವ್ ಕ್ರೂ’ ಎನ್ನುವ ತನ್ನದೇ ಸಂಸ್ಥೆ ಸ್ಥಾಪಿಸಿ, ಪೊಸ್ಟರ್ ವಿನ್ಯಾಸದಲ್ಲಿ ಸಂಪೂರ್ಣವಾಗಿ ಆದರ್ಶ್ ಮೋಹನ್ದಾಸ್ ತೊಡಗಿಕೊಂಡಿದ್ದಾರೆ. ಬೆಂಗಳೂರಿಗೆ ಬಂದು ಕನ್ನಡ ಮಾತನಾಡಲು ಕಲಿತ ಇವರು, ಅಪ್ಪಟ ಕನ್ನಡ ಪ್ರೇಮಿ. ತಾನು ರಚಿಸುವ ಕನ್ನಡ ಪೋಸ್ಟರುಗಳಿಗೆ ಮೊದಮೊದಲು ಬೇರೊಬ್ಬರಲ್ಲಿ ಅಕ್ಷರ ವಿನ್ಯಾಸ ಮಾಡಿಸುತ್ತಿದ್ದರು. ನಂತರದ ದಿನಗಳಲ್ಲಿ ಕನ್ನಡ ಅಕ್ಷರ ಮಾಲೆಯನ್ನು ಅಭ್ಯಸಿಸಿ, ತಾನೇ ಅಕ್ಷರ ವಿನ್ಯಾಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
“ಕ್ರೀಯಾಶೀಲ ವ್ಯಕ್ತಿತ್ವದ ಆದರ್ಶ್ ಮೋಹನ್ದಾಸ್ರವರಿಗೆ ಚಿತ್ರವಿನ್ಯಾಸ ಕರಗತ ವಿಷಯ. ಅವರು ಬಿಡಿಸಿರುವ ದಾಮಾಯಣದ ಪೋಸ್ಟರಿನ ಪ್ರತಿ ಅಂಶಗಳೂ ನಾವು ಹೇಳಲು ಹೊರಟಿರುವ ಕಥೆಗೆ ಪೂರಕವಾಗಿವೆ. ಅವರು ಬಿಡಿಸಿದ ಪೋಸ್ಟರಿನ ಮೊದಲ ಮಾದರಿಯೇ ನಮಗೆ ವಾವ್! ಎನಿಸಿತ್ತು.” ಎನ್ನುತ್ತಾರೆ ದಾಮಾಯಣ ಚಲನಚಿತ್ರದ ನಿರ್ದೇಶಕ ಶ್ರೀಮುಖ.