ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಿ, ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಮನವಿ
ಉಡುಪಿ: (ಉಡುಪಿ ಟೈಮ್ಸ್ ವರದಿ)ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ವಸ್ತುಗಳ ಮಾರಾಟ ಕೇಂದ್ರಗಳ ಮುಂದೆ ಗ್ರಾಹಕ ನಿರ್ಬಂಧ ರೇಖೆಗಳನ್ನು ಕಟ್ಟುನಿಟ್ಟಿನಲ್ಲಿ ತಕ್ಷಣದಿಂದಲೇ ಹಾಕುವಂತೆ ಮಾಡಬೇಕು. ಗ್ರಾಹಕರು ಅಗತ್ಯ ಸಾಮಗ್ರಿಗಳ ಖರೀದಿಗೆ ಜಿಲ್ಲಾಡಳಿತ ಸಮಯ ನಿಗದಿ ಮಾಡಬೇಕಾಗಿದೆ.
ಜಿಲ್ಲಾಡಳಿತ ಜಿಲ್ಲೆಯ ಬಹುತೇಕ ಎಲ್ಲ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಔಷಧಿ ಅಂಗಡಿ, ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆಯಲ್ಲಿನ ಅಂಗಡಿಗಳಿಗೆ ಬರುವ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗ್ರಾಹಕ ರೇಖೆಗಳನ್ನು ಹಾಕುವ ಜನಾಂದೋಲನವನ್ನೇ ರೂಪಿಸಿ ಅಂಗಡಿ ಮಾಲೀಕರಿಗೆ, ಗ್ರಾಹಕರಿಗೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಬೇಕಾಗಿದೆ.
ಜನತಾ ಕರ್ಫ್ಯೂವನ್ನು ಪ್ರಧಾನಿಯವರು ಮೂರು ದಿನಗಳ ಮೊದಲೇ ಘೋಷಿಸಿದ್ದರು. ಜನರು ಅದಕ್ಕಾಗಿ ಸರ್ವ ಸಿದ್ದತೆ ಮಾಡಿಕೊಂಡಿದ್ದರು, ಆದರೆ 21 ದಿನ ಲಾಕ್ ಡೌನ್ ಸೋಮವಾರ ರಾತ್ರಿ 8 ಗಂಟೆಗೆ ಫೋಷಿಸಿ ಸಾಮನ್ಯ ಎಲ್ಲರನ್ನು ಇಕ್ಕಟ್ಟಿಗೆ ಸಿಲುಕಿಸುವಂತಾಗಿದೆ. ದಿನ ನಿತ್ಯ ಬಳಕೆಯ ವಸ್ತುಗಳನ್ನು ಖರೀಸಲು ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಲಾಕ್‌ಡೌನ್ ವೇಳೆ ಅಗತ್ಯ ವಸ್ತುಗಳು ಸಿಗುತ್ತವೋ ಎನ್ನುವ ಆತಂಕ ಮತ್ತು ಚಿಂತೆಯಲ್ಲಿದ್ದಾರೆ ಸಾರ್ವಜನಿಕರು. ಅಂಗಡಿ ಮುಂಗಟ್ಟುಗಳಿಗೆ, ತರಕಾರಿ ಖರೀದಿಗೆ ಯಾವಾಗಲೆಂದರೆ ಆವಾಗ ಮನೆ ಬಿಟ್ಟು ಹೊರಗೆ ಬರುತ್ತಿದ್ದಾರೆ. ಇದರಿಂದ ಪೊಲೀಸರಿಗೂ ಕಾನೂನು ಪರಿಪಾಲನೆ ಮಾಡಲು ಕಷ್ಟವಾಗುತ್ತಿದೆ.
ಸಾರ್ವಜನಿಕರು ಮನೆ ಬಿಟ್ಟು ಹೊರಗೆ ಬರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಾಮಗ್ರಿಗಳ ಖರೀದಿಗೆ ಸಮಯವನ್ನು ನಿಗದಿ ಪಡಿಸಬೇಕಿದೆ. ಆ ವೇಳೆಯಲ್ಲಿ ಮಾತ್ರ ಸಾರ್ವಜನಿಕರು ಮನೆಯಿಂದ ಹೊರ ಬಂದು ತಮಗೆ ನಿತ್ಯ ಅಗತ್ಯವಸ್ತುಗಳ ಖರೀದಿಗೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ.
ಒಂದು ಬಾರಿ ಸಾರ್ವಜನಿಕರು ನಿಗದಿತ ಅವಧಿಯಲ್ಲಿ ಮನೆಯಿಂದ ಹೊರಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗೆ ತೆರಳಿದಲ್ಲಿ ವಾಪಸ್ ಹೊರಗೆ ಬರುವ ಸಾಹಸ ಮಾಡುವುದು ತಪ್ಪುತ್ತದೆ. ಕಾನೂನು ಸುವ್ಯವಸ್ಥೆಗೂ ಅಡ್ಡಿಯಾಗದು ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಅಗತ್ಯವಸ್ತುಗಳ ಖರೀದಿಗೆ ಸಮಯ ನಿಗದಿ ಆಗಿದ್ದು, ಇಲ್ಲಿಯೂ ಸಮಯ ನಿಗದಿ ಆದಲ್ಲಿ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಜನತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೂ ಸಹಕಾರಿ ಆಗಲಿದೆ. ಅಗತ್ಯ ವಸ್ತುಗಳ ಖರೀದಿ ಸಮಯದ ಬಳಿಕವೂ ಬರುವ ಜನತೆಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿ ಎನ್ನುವ ಅಭಿಪ್ರಾಯವನ್ನು ಬಹುತೇಕರು ವ್ಯಕ್ತ ಪಡಿಸುತ್ತಿದ್ದಾರೆ.
ಇತರ ಜಿಲ್ಲೆಗಳಂತೆ ಇಲ್ಲಿಯೂ ಈ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಯಾವ ಕ್ರಮಕ್ಕೆ ಮುಂದಾಗಲಿದೆ ಎನ್ನುವುದನ್ನು ಕಾಯ್ದುನೋಡಬೇಕು.