ಪ್ರವಾಸೋದ್ಯಮ ಉತ್ತೇಜಿಸಲು ಸಮಗ್ರ ಯೋಜನೆ ರೂಪಿಸಿ: ಸಿ.ಟಿ.ರವಿ

ಉಡುಪಿ : ರಾಜ್ಯದ ಪ್ರವಾಸೋದ್ಯಮದ ದೃಷ್ಟಿಯಿಂದ ನೋಡಿದಾಗ ಉಡುಪಿ ಜಿಲ್ಲೆಯು ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತಹ ಸಾಮಥ್ರ್ಯ ಹೊಂದಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆಯೊಂದನ್ನು ರೂಪಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ.ರವಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಜಿಲ್ಲೆಯ ಪ್ರವಾಸೋದ್ಯಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

320 ಕಿ.ಮೀ ಕಡಲ ಕರಾವಳಿ, ಯುನೆಸ್ಕೋ ಮಾನ್ಯತೆ ಪಡೆದ ಮೂರು ವಿಶ್ವ ಪಾರಂಪರಿಕ
ತಾಣಗಳು, 5 ರಾಷ್ಟ್ರೀಯ ಉದ್ಯಾನವನಗಳು, 30 ವನ್ಯಜೀವಿ ಅಭಯಾರಣ್ಯ, 15 ಗಿರಿಧಾಮ, 40 ಜಲಪಾತಗಳು ಹಾಗೂ ಇನ್ನೂ ಅನೇಕ ವೈವಿಧ್ಯತೆಗಳನ್ನು ಹೊಂದಿರುವ ರಾಜ್ಯವು ಪ್ರವಾಸೋದ್ಯಮದಲ್ಲಿ ವಿಪುಲ ಅವಕಾಶವನ್ನು ಹೊಂದಿದೆ. ರಾಜ್ಯದಂತೆಯೂ ಉಡುಪಿ ಜಿಲ್ಲೆಯೂ ಕೂಡಾ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿರುವುದರಿಂದ ವಿವಿಧ ಇಲಾಖೆಗಳಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಹಭಾಗಿತ್ವ ಮತ್ತು ಸಮನ್ವಯದೊಂದಿಗೆ ಜಿಲ್ಲೆಗೆ ಬೇಕಾದ ಸಮಗ್ರ ಪ್ರವಾಸೋದ್ಯಮ ಯೋಜನೆಯನ್ನು ರೂಪಿಸಬೇಕೆಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸಲು ಸಿ.ಆರ್.ಜೆಡ್ ವಲಯ ಮತ್ತು ಪರಿಸರ ಸೂಕ್ಷ ವಲಯಗಳು ಅಡ್ಡಿಯಾಗುತ್ತಿರುವುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದಾಗ ವನ್ಯಜೀವಿಗಳನ್ನು ಹೊರಗಿಟ್ಟು ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ, ಅವುಗಳನ್ನೂ ಯೋಜನೆಯ ಒಂದು ಭಾಗವಾಗಿಸಿ, ಕಾನೂನಿನನ್ವಯ ಎಷ್ಟು ಜಾಗವನ್ನು ಪ್ರವಾಸೋದ್ಯಮಕ್ಕೆ ಬಿಡುಗಡೆ ಮಾಡಲು ಸಾಧ್ಯವೋ ಅಷ್ಟನ್ನು ನೀಡಿ, ಉಳಿದ ಜಾಗದಲ್ಲಿ ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಯೋಜನೆಗಳನ್ನು ರೂಪಿಸಲು ಅಧಿಕಾರಿಗಳಿಗೆ ತಿಳಿಸಿದರು. ದೇಶದಲ್ಲೆ ವಿಶಿಷ್ಟವಾದ ಕಂಬಳದಂತಹ ಗ್ರಾಮೀಣಕ್ರೀಡೆಗೆ ಪ್ರಚಾರ ನೀಡಿದಾಗ ಅಂತರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಸೆಳೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದ ಸಚಿವರು, ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆಚರಣೆಯಲ್ಲಿರುವ ವಿಶಿಷ್ಟ ಹಬ್ಬಗಳನ್ನು ಗುರುತಿಸಲು ವಿಶೇಷ ಕ್ಯಾಲೆಂಡರ್ ಒಂದನ್ನು ರಚಿಸಿ, ಅದರಂತೆಯೆ ಪ್ರತಿ ತಿಂಗಳೂ ಬರುವ ಹಬ್ಬಗಳನ್ನು ಆಚರಿಸಬೇಕು.

ಜಿಲ್ಲೆಯಲ್ಲಿರುವ ಎಲ್ಲಾ ಪಾರಂಪರಿಕ ಮತ್ತು ಪುರಾತತ್ವ ಕಟ್ಟಡ ಹಾಗೂ
ಪ್ರೇಕ್ಷಣೀಯ ಸ್ಥಳಗಳ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ಸೈನ್ ಬೋರ್ಡ್, ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಅನಾವರಣಗೊಳಿಸಿದಾಗ ಜನರಿಗೆ ಇವುಗಳ ಬಗ್ಗೆ ಮಾಹಿತಿ ದೊರೆತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತದೆ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಅರ್ಹ ವಾಹನ ಚಾಲಕರಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಿರುವ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ನಿಗದಿ ಪಡಿಸಲಾಗಿದ್ದ 290 ಗುರಿಗಳಲ್ಲಿ 281 ಗುರಿಗಳನ್ನು ಈಗಾಗಲೇ ಸಾಧಿಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದಾಗ, ಪ್ರವಾಸೋದ್ಯಮದ ವಾಹನಗಳೆಂದು ಜನರಿಗೆ ಗೊತ್ತಾಗುವಂತೆ ಇಲಾಖೆಯ ಲೋಗೋಗಳನ್ನು ವಾಹನಗಳಲ್ಲಿ ಅಳವಡಿಸಲು ಮತ್ತು ಪ್ರವಾಸಿ ಟ್ಯಾಕ್ಸಿಗಳ ಕುರಿತ ಆಪ್ ರಚಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಸೋದ್ಯಮದ ಟ್ಯಾಕ್ಸಿಗಳಿಗೆ ಸಬ್ಸಿಡಿ ನೀಡುವಂತೆಯೆ, ಮೊಬೈಲ್ ಕ್ಯಾಂಟೀನ್ ಮತ್ತು ಹೌಸ್ ಬೋಟ್‍ಗಳಿಗೂ ಸಬ್ಸಿಡಿ ನೀಡಬೇಕೆನ್ನುವ ಬೇಡಿಕೆಗೆ ಸ್ಪಂದಿಸಿದ ಸಚಿವರು ಕ್ರಿಯಾ ಯೋಜನೆಯನ್ನು ಅಧ್ಯಯನ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದರು.
ಸಮಗ್ರ ಕರ್ನಾಟಕ ಕರಾವಳಿಯ ಕಡಲ ತೀರದ ಪ್ರವಾಸೋದ್ಯಮವನ್ನು ಉತ್ತೇಜಿಸಿ ಹೆಚ್ಚು ಹೆಚ್ಚು ದೇಶಿ ಮತ್ತು ವಿದೇಶೀ ಪ್ರಯಾಣಿಕರು ಜಿಲ್ಲೆಗೆ ಭೇಟಿ ನೀಡಿ ಹೆಚ್ಚು ಸಮಯ ಜಿಲ್ಲೆಯಲ್ಲಿಯೇ ಕಳೆಯುವಂತಾಗಲು ಅನುಸರಿಸಬೇಕಾದ ಕ್ರಮಗಳ ಮಾರ್ಗದರ್ಶನವನ್ನು ಸಚಿವರು ಅಧಿಕಾರಿಗಳಿಗೆ ನೀಡಿದರು.


ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯನ ಕುರಿತಂತೆ ತಾವು ಪ್ರವಾಸ ಮಾಡುತಿದ್ದು, ಉಡುಪಿ 12 ನೇ ಜಿಲ್ಲೆಯಗಿದೆ, ಎಲ್ಲಾ ಜಿಲ್ಲೆಗಳ ಪ್ರವಾಸ ಮುಗಿದ ನಂತರ ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ಸಚಿವರು, ಉಡುಪಿ ಜಿಲ್ಲೆಗೆ ಸಂಬಂದಿಸಿದಂತೆ 16.10 ಕೋಟಿ ರೂ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, 8.60 ಕೋಟಿ ರೂ ಬಿಡುಗಡೆಗೊಳಿಸಲಾಗಿದೆ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋಧ್ಯಮ ಅಭಿವೃದಿಗೆ ಪ್ರತ್ಯೇಕ ಕೋಸ್ಟಲ್ ಪ್ಲಾನ್ ರೂಪಿಸಲಾಗುವುದು ಎಂದರು.


ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿರುವ ವಿಶೇಷ ಆಚರಣೆಗಳು, ಗ್ರಾಮದಲ್ಲಿ ಹುಟ್ಟಿದ ಮಹಾಪುರುಷರು, ಗ್ರಾಮದ ಇತಿಹಾಸ, ಸಾಮಾಜಿಕ ಜನಜೀವನ, ಆಹಾರ ಮತ್ತು ಆರ್ಥಿಕ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಎಲ್ಲಾ ಶಾಲೆಗಳಿಂದ 5 ರಿಂದ 6 ಮಕ್ಕಳ ತಂಡವೊಂದನ್ನು ರಚಿಸಿ ಮಕ್ಕಳ ಮೂಲಕ ಗ್ರಾಮದಅಧ್ಯಯನ ನಡೆಸಿ ಅದರ ವರದಿಯನ್ನು ಇಲಾಖೆಗೆ ನೀಡಿದಲ್ಲಿ, ವಿಕಿಪೀಡಿಯಾ ಮಾದರಿಯ ವೆಬ್ ಸೈಟ್‍ಒಂದನ್ನು ರಚಿಸಿ ಅಲ್ಲಿ ಈ ಎಲ್ಲಾ ಮಾಹಿತಿಗಳನ್ನು ಪ್ರಕಟಿಸಲಾಗುವುದು ಎಂದು ಸೂಚಿಸಿದ ಸಚಿವರು, ಶಿಕ್ಷಣ ಇಲಖೆಯಿಂದ ಆಯೋಜಿಸುವ ಚಿಣ್ಣರ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳಿಗೆ ಶಾಲಾ ಮಕ್ಕಳನ್ನು ಕಡ್ಡಾಯ ಪ್ರವಾಸ ಕರೆದುಕೊಂಡು ಹೋಗಿ ಗಾಂಧೀಜಿಯವರ ತತ್ವಾದರ್ಶಗಳ ವಿವರಣೆಯನ್ನು ನೀಡಿಅವರ ತತ್ವಗಳಲ್ಲಿ ಕನಿಷ್ಠ ಮೂರು ತತ್ವಗಳನ್ನು ಮಕ್ಕಳೂ ಅಳವಡಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಡಿಡಿಪಿಐಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಮಹಾಪುರುಷರ ಜಯಂತಿಯನ್ನು ಯಾವ ರೀತಿಯಲ್ಲಿ ಆಚರಿಸಲಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ಅಧಿಕಾರಿಗಳು ನಾಗರಿಕರ ಬಳಿಗೆ ತೆರಳಿ ಜಯಂತಿಗಳು ಹೇಗಿರಬೇಕು, ಅವುಗಳ ಆಚರಣೆ ಮತ್ತು ಸ್ವರೂಪದ ಬಗ್ಗೆ ಅವರ ಅಭಿಪ್ರಾಯ ಸಂಗ್ರಹಿಸಿ, ಜಯಂತಿಗಳು ಅರ್ಥಪೂರ್ಣವಾಗಿರಬೇಕಾದರೆ ಏನು ಮಾಡಬಹುದೆನ್ನುವ ಮಾಹಿತಿ ಪಡೆದು ಅದನ್ನು ಜನಪ್ರತಿನಿಧಿಗಳಿಗೆ ನೀಡಿ, ಈ ಮಾಹಿತಿಯ ಆಧಾರದ ಮೇಲೆಯೆ ಜಯಂತಿಗಳ ಆಚರಣೆಯನ್ನು ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದರು.


ಜಿಲ್ಲೆಗೊಂದು ಸುಸಜ್ಜಿತ ರಂಗಮಂದಿರ ಬೇಕೆನ್ನುವುದು ಬಹು ದಿನಗಳ ಬೇಡಿಕೆ, ಈಗಾಗಲೇ ಆದಿ ಉಡುಪಿಯಲ್ಲಿ ರಂಗಮಂದಿರದ ಶಿಲಾನ್ಯಾಸ ಕಾರ್ಯ ನಡೆದಿದ್ದರೂ ಸ್ಥಳಾವಾಕಾಶದ ಕೊರತೆಯಿದೆ ಎನ್ನುವುದನ್ನು ಮನಗಂಡ ಸಚಿವರು, ಯಕ್ಷಗಾನ ಕೇಂದ್ರಿತ ರಂಗಾಯಣವನ್ನು ನಿರ್ಮಾಣಮಾಡುವ ಉದ್ದೇಶವನ್ನು ವ್ಯಕ್ತಪಡಿಸುತ್ತಾ ಸುಸಜ್ಜಿತ ರಂಗಮಂದಿರಕ್ಕೆ ಅಗತ್ಯವಿರುವ ಕನಿಷ್ಠ ನಾಲ್ಕರಿಂದ-ಐದು ಎಕರೆ ಜಾಗವನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ರಂಗಮಂದಿರ ನಿರ್ಮಾಣ
ಕಾರ್ಯದಲ್ಲಿ ರಂಗಕಲಾವಿದರನ್ನೂ ಜೋಡಿಸಿಕೊಂಡು, ಕಟ್ಟಡಕ್ಕೆ ತಗಲುವ ವೆಚ್ಚದ ಅಂದಾಜು ಆಯವ್ಯಯವನ್ನು ತಯಾರಿಸಿ ನೀಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ಶಾಸಕ ರಘುಪತಿ ಭಟ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಸಿಇಒ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂದ ಕಲ್ಲೋಳಿಕರ್, ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!