ಮಹಾರಾಷ್ಟ್ರ: ಕೊರೋನಾಗೆ ಮೂರನೇ ಬಲಿ, 125ಕ್ಕೆ ಏರಿದ ಸೋಂಕಿತರ ಸಂಖ್ಯೆ
ನವದೆಹಲಿ: ವಿಶ್ವಾದ್ಯಂತ ವ್ಯಾಪಕವಾಗಿ ಹಬ್ಬಿರುವ ಮಾರಕ ಕೊರೋನಾ ವೈರಸ್ ದಾಳಿಗೆ ಭಾರತದಲ್ಲಿ ಇದೀಗ ಮೂರನೇ ವ್ಯಕ್ತಿ ಬಲಿಯಾಗಿದ್ದು, ಮಹಾರಾಷ್ಟ್ರದಲ್ಲಿ 64 ವರ್ಷದ ಸೋಂಕು ಪೀಡಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕೊರೋನಾ ಸೋಂಕಿಗೆ ತುತ್ತಾಗಿ ಮುಂಬೈನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 64 ವರ್ಷದ ವ್ಯಕ್ತಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
125ಕ್ಕೆ ಏರಿದ ಸೋಂಕಿತರ ಸಂಖ್ಯೆ
ಇನ್ನು ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಕೂಡ ದಿನಗಳೆದಂತೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದೀಗ ಭಾರತದಲ್ಲಿ ವೈರಸ್ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ. ಈ ಪೈಕಿ ಭಾರತದಲ್ಲಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 36 ಮಂದಿ ಸೋಂಕಿತರಿದ್ದು, ಕರ್ನಾಟಕದಲ್ಲಿ 10 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ಕೇರಳದಲ್ಲಿ 22, ತೆಲಂಗಾಣದಲ್ಲಿ 4, ದೆಹಲಿಯಲ್ಲಿ 7, ಉತ್ತರ ಪ್ರದೇಶದಲ್ಲಿ 12 ಸೇರಿದಂತೆ ಹಲವು ಭಾಗಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.