ಮಹಾರಾಷ್ಟ್ರ: ಮಲ್ಪೆಯ ಬೋಟ್, 7 ಮಂದಿ ಮೀನುಗಾರರ ಬಂಧನ
ಉಡುಪಿ: ಉಡುಪಿ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಶ್ರೀಲಕ್ಷ್ಮೀ ಬೋಟ್ ಹಾಗೂ 7 ಮಂದಿ ಮೀನುಗಾರರನ್ನು ಮಹಾರಾಷ್ಟ್ರದ ಮಾಲ್ವಾನ್ ಗಡಿಯಲ್ಲಿ ಬುಧವಾರ ನಸುಕಿನಲ್ಲಿ ಕೋಸ್ಟ್‌ಗಾರ್ಡ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಾದ ರಾಮ, ವೆಂಕಟೇಶ್, ಕುಮಟಾದ ಗಣಪತಿ, ವಿನಾಯಕ, ಹೊನ್ನಾವರದ ಮಂಜು ಮಂಕಿ, ಗೋವಿಂದ ಮಂಕಿ, ಅಂಕೋಲಾ ರಾಜು ಎಂಬುವರನ್ನು ವಶಕ್ಕೆ ಪಡೆದು, ದೇವಘಡ್ ಬಂದರಿಗೆ ಕರೆದೊಯ್ಯಲಾಗಿದೆ. ಕುಂದಾಪುರದ ಅಂಕಿತ್ ಶೆಟ್ಟಿ ಬೋಟ್‌ನ ಮಾಲೀಕರಾಗಿದ್ದು, ಫೆ.2 ರಂದು ಮಲ್ಪೆ ಬಂದರಿನಿಂದ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಬೋಟ್ ಹಾಗೂ ಮೀನುಗಾರರ ವಶ ಸಂಬಂಧ ಮಹಾರಾಷ್ಟ್ರ ಕೋಸ್ಟ್‌ಗಾರ್ಡ್ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ಕರಾವಳಿ ಕಾವಲುಪಡೆಯ ಎಸ್‌ಪಿ ಚೇತನ್ ಮಾಹಿತಿ ನೀಡಿದರು. ಶ್ರೀಲಕ್ಷ್ಮೀ ಬೋಟ್ ಹಾಗೂ ಏಳು ಮೀನುಗಾರರನ್ನು ಮಹಾರಾಷ್ಟ್ರದಲ್ಲಿ ವಶಕ್ಕೆ ಪಡೆದಿರುವುದು ಖಂಡನೀಯ ಎಂದು ಟ್ರಾಲ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಗಡಿಯಿಂದ ಹೊರಗೆ, ದೇಶದ ಗಡಿಯೊಳಗೆ ಮೀನುಗಾರಿಕೆ ಮಾಡುತ್ತಿದ್ದ ಬೋಟ್ ಅನ್ನು ಮಾಲ್ವಾನ್ ಮೀನುಗಾರರು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. |