ಮಡಿಕೇರಿ ರಸ್ತೆ ಅವ್ಯವಸ್ಥೆ : ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಮಡಿಕೇರಿ ;  ನಗರದ ಮಹದೇವಪೇಟೆ ಮತ್ತು ಮಾರುಕಟ್ಟೆ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ಒತ್ತಾಯಿಸಿ ಮಡಿಕೇರಿಯ ವಿವಿಧ ಸಂಘಟನೆಗಳು ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿದವು.
ಮಾರುಕಟ್ಟೆ ಎದುರು ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಸ್ಥಳಕ್ಕೆ ನಗರಸಭಾ ಆಯುಕ್ತರು ಆಗಮಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ನಗರಸಭೆಯ ಮಾಜಿ ಸದಸ್ಯ ಬಿ.ಎಂ.ರಾಜೇಶ್ ನಗರದ ಹೃದಯ ಭಾಗದಲ್ಲಿರುವ ಮಹದೇವಪೇಟೆ ವಾಣಿಜ್ಯ ಕೇಂದ್ರಗಳಿರುವ ಪ್ರದೇಶವಾಗಿದ್ದು, ಪ್ರತಿದಿನ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನಗಳು ಇದೇ ಮಾರ್ಗವನ್ನು ಅವಲಂಬಿಸಬೇಕಾಗಿದೆ. ಒಂದೂವರೆ ವರ್ಷದ ಹಿಂದೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಫುಟ್‌ಪಾತ್ ನಿರ್ಮಾಣಕ್ಕೆ ಅನುಮೋದನೆ ದೊರೆತ್ತಿದ್ದರೂ ಇಲ್ಲಿಯವರೆಗೆ ಈ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.

 

ನಗರಸಭೆ ಇನ್ನಾದರು ಎಚ್ಚೆತ್ತುಕೊಂಡು ಮುಂದಿನ ಹತ್ತು ದಿನಗಳೊಳಗೆ ಗುಣಮಟ್ಟದ ಕಾಮಗಾರಿ ನಡೆಸದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ರಾಜೇಶ್ ಎಚ್ಚರಿಕೆ ನೀಡಿದರು.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಆಟೋ ಚಾಲಕರ ಸಂಘ ಅಧ್ಯಕ್ಷ ಸುಲೇಮಾನ್ ಮಾತನಾಡಿ, ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ನಗರಸಭೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಟೀಕಿಸಿದರು. ಈ ಹಿಂದೆ ರಸ್ತೆಯನ್ನು ತರಾತುರಿಯಲ್ಲಿ ಕಾಂಕ್ರಿಟೀಕರಣಗೊಳಿಸಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ. ನಡೆದಿರುವ ಕಾಮಗಾರಿ ಕೂಡ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದ ಅವರು, ಇಂಟರ್ ಲಾಕ್ ಮತ್ತು ಚರಂಡಿಗೆ ಸ್ಲಾಬ್‌ನ್ನು ಅಳವಡಿಸುವ ಕಾರ್ಯಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರಿಗೆ ಹಾಗೂ ಆಟೋ ಚಾಲಕರಿಗೆ ರಸ್ತೆ ಅವ್ಯವಸ್ಥೆಯಿಂದ ತೊಂದರೆ ಉಂಟಾಗಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದರು.

 

ಸ್ಥಳಕ್ಕೆ ಆಗಮಿಸಿದ ನಗರಸಭಾ ಅಭಿಯಂತರರಾದ ವನಿತಾ ಹಾಗೂ ಗೋಪಾಲಯ್ಯ ಸ್ಥಳ ಪರಿಶೀಲಿಸಿ, ಒಂದು ವಾರದಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಡಿಕೇರಿ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ರವಿಗೌಡ, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ದಾವುದ್, ಕಾರ್ಯದರ್ಶಿ ಹುಸೇನ್, ಮಡಿಕೇರಿ ಮಾರುಕಟ್ಟೆ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅಭಿಮಾನಿ ಸಂಘದ ಮುನೀರ್ ಮಾಚರ್, ಪ್ರಮುಖರಾದ ಸವಿತಾರಾಕೇಶ್, ಪ್ರಭು ರೈ, ಕಲೀಲ್, ಅಮೀನ್ ಮೊಹಿಸಿನ್ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!