ಗುಡ್ಡದ ಮನೆಗಳಿಗೆ ಮಡಿಕೇರಿ ನಗರಸಭೆ ನೋಟಿಸ್ : ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ
ಮಡಿಕೇರಿ: ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪದಿಂದ ಪಾರಾಗುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಗರದ ಇಂದಿರಾನಗರ, ಚಾಮುಂಡೇಶ್ವರಿ ನಗರ ಹಾಗೂ ಮಂಗಳಾದೇವಿ ನಗರ ಬಡಾವಣೆಗಳ ನಿವಾಸಿಗಳಿಗೆ ನಗರಸಭೆ ನೋಟಿಸ್ ಜಾರಿ ಮಾಡಿದ್ದು, ಸ್ಥಳೀಯರಲ್ಲಿ ಆತಂಕ ಎದುರಾಗಿದೆ.
ಈಗಾಗಲೇ ಮಳೆಯ ಆತಂಕದ ನಡುವೆಯೇ ಕಾಲ ಕಳೆಯುತ್ತಿರುವ ಈ ನಗರಗಳ ಜನತೆ, ಇದೀಗ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದರೆ ಎಲ್ಲಿಗೆ ತೆರಳುವುದೆಂದು ತೋಚದೆ ಕಂಗಾಲಾಗಿದ್ದಾರೆ. ಕಳೆದ ಬಾರಿಯ ಜಲಪ್ರಳಯಕ್ಕೆ ಕೊಡಗು ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಅವುಗಳಲ್ಲಿ ಮಡಿಕೇರಿ ನಗರದ ಈ ಮೂರು ವಾರ್ಡ್ಗಳು ಹೆಚ್ಚು ಅನಾಹುತಕ್ಕೆ ತುತ್ತಾಗಿದ್ದವು. ಅದರ ಕರಾಳ ನೆನೆಪು ಮಾಸುವ ಮುನ್ನವೇ ಮತ್ತೊಂದು ಮಳೆಗಾಲ ಆರಂಭವಾಗಿದ್ದು, ನಗರಸಭೆ ನೀಡಿರುವ ನೋಟಿಸ್ ಅಪಾಯದ ಸ್ಥಳದಲ್ಲಿರುವ ಜನರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.
ನೋಟಿಸ್ನಲ್ಲಿ ಏನಿದೆ:
2018ನೇ ಸಾಲಿನಲ್ಲಿ ಮಳೆಗೆ ಆದ ನಷ್ಟ, ತೊಂದರೆಗಳು ಮರುಕಳಿಸದೇ ಇರಲು ಅಪಾಯ ಸ್ಥಿತಿಯಲ್ಲಿರುವ ಸ್ಥಳ, ಮನೆ, ಎತ್ತರದ ಪ್ರದೇಶದಲ್ಲಿರುವ ಮನೆಗಳು, ಇಳಿಜಾರು ಬೆಟ್ಟದ ಕೆಳಗೆ ಇರುವ ಮನೆಗಳು, ಮರಗಳ ಕೆಳಭಾಗದಲ್ಲಿ ಇರುವ ಮನೆಗಳಲ್ಲಿ ವಾಸವಿರುವವರು ಸುರಕ್ಷತೆಯ ದೃಷ್ಟಿಯಿಂದ ಮಳೆಗಾಲದ ಅವಧಿಯಲ್ಲಿ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವ ಅವಶ್ಯವಿದೆ.
ಸದ್ಯ ವಾಸವಾಗಿರುವ ಸ್ಥಳ ಮಳೆ, ಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದ ವಾಸಿಸಲು ಯೋಗ್ಯವಿಲ್ಲದ ಕಾರಣ ಪ್ರಾಣ ಹಾನಿಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸ್ಥಳವನ್ನು ತೆರವುಗೊಳಿಸುವುದು. ಈ ಸೂಚನೆಯನ್ನು ಪಾಲಿಸದ ಪಕ್ಷದಲ್ಲಿ ಮುಂದೆ ಆಗುವ ಕಷ್ಟ ನಷ್ಟಗಳಿಗೆ ನೀವೇ ಜವಾಬ್ದಾರರಾಗುತ್ತೀರಿ’ ಎಂದು ನಗರಸಭೆ ನೀಡಿರುವ ನೋಟೀಸ್ನಲ್ಲಿ ಎಚ್ಚರಿಸಲಾಗಿದೆ.