ನಗರಸಭಾ ಆಯುಕ್ತರ ವರ್ಗಾವಣೆಗೆ ಮಡಿಕೇರಿ ನಗರ ಕಾಂಗ್ರೆಸ್ ಒತ್ತಾಯ
ಮಡಿಕೇರಿ : ನಗರಸಭೆಯಲ್ಲಿ ಅನುದಾನ ಲಭ್ಯವಿದ್ದರು ಜನರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮತ್ತು ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ನಗರಸಭಾ ಆಯುಕ್ತರು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಆಯುಕ್ತರ ವರ್ಗಾವಣೆಗೆ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದ ಹಾನಿಗೀಡಾದ ಬಡಾವಣೆಗಳ ಅಭಿವೃದ್ಧಿಗೆ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲವೆಂದು ಟೀಕಿಸಿದ್ದಾರೆ.
ಇಂದಿರಾನಗರ, ಚಾಮಂಡೇಶ್ವರಿ ನಗರ, ಮಂಗಳಾದೇವಿ ನಗರ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆ, ರಾಜ ಕಾಲುವೆ, ಚರಂಡಿಗಳು ಹಾಳಾಗಿ ಜನಜೀವನವೇ ಅಸ್ತವ್ಯಸ್ತಗೊಂಡಿತ್ತು. ೩ನೇ ಹಂತದ ನಗರೋತ್ಥಾನ ಕ್ರಿಯಾ ಯೋಜನೆಯಡಿ ಸುಮಾರು ೨೯೭೫ ಲಕ್ಷ ರೂ.ಗಳಷ್ಟು ಅನುದಾನ ಲಭ್ಯವಿದ್ದು, ಹಾನಿಗೀಡಾದ ಪ್ರದೇಶಗಳ ದುರಸ್ತಿ ಕಾರ್ಯಕ್ಕೆ ಅವಕಾಶವಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇಕಡಾವಾರು ಅನುದಾನವೂ ಇದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದ್ದರೂ, ಇದನ್ನು ನಗರಸಭೆಯ ಆಯುಕ್ತರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ಎಡವಿದ್ದಾರೆ ಎಂದು ಕೆ.ಯು.ಅಬ್ದುಲ್ ರಜಾಕ್ ಆರೋಪಿಸಿದ್ದಾರೆ.
ರಾಣಿಪೇಟೆಯಿಂದ ಕೋದಂಡರಾಮ ದೇವಾಲಯದವರೆಗಿನ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಹಲವು ಬಾರಿ ಆಯುಕ್ತರಲ್ಲಿ ಮನವಿ ಮಾಡಿಕೊಂಡರು ಇಲ್ಲಿಯವರೆಗೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಚರಂಡಿಗಳು ಕಳೆದ ಮಳೆಗಾಲದಲ್ಲಿ ತುಂಬಿ ಹರಿದ ಪರಿಣಾಮ ನಡೆದಾಡಲು ಕೂಡ ಸಾಧ್ಯವಿರಲಿಲ್ಲ. ಇದರ ದುರಸ್ತಿ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಇಲ್ಲಿಯವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ನೂತನ ಖಾಸಗಿ ಬಸ್ ನಿಲ್ದಾಣದ ಎದುರಿನ ರಾಜಕಾಲುವೆಯ ತಡೆಗೊಡೆಯ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ನಗರದ ತುಂಬಾ ನ್ಯೂನತೆಗಳೇ ಎದ್ದು ಕಾಣುತ್ತಿದ್ದು, ಆಯುಕ್ತರು ಮಾತ್ರ ಕಂಡು ಕಾಣದಂತೆ ತಮ್ಮ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಗರಸಭೆಯ ವಿರುದ್ಧ ಜನರು ಧರಣಿ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ. ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ನಗರಸಭೆಗೆ ಭೇಟಿ ನೀಡಿದರೆ ಬೆರಳೆಣಿಕೆಯ ಸಿಬ್ಬಂದಿ ಹಾಜರಿರುತ್ತಾರೆ, ಉಳಿದ ಖುರ್ಚಿಗಳು ಖಾಲಿ, ಖಾಲಿಯಾಗಿರುತ್ತವೆ. ಸಿಬ್ಬಂದಿಗಳ ಬಗ್ಗೆ ಪ್ರಶ್ನಿಸಿದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿದ್ದಾರೆ ಎನ್ನುವ ಉತ್ತರ ಬರುತ್ತದೆ.
ಪ್ರತೀ ಬಾರಿ ಇದೇ ರೀತಿಯಾಗುತ್ತಿದ್ದು, ಯಾವುದೇ ಕಡತಗಳು ಶೀಘ್ರ ವಿಲೇವಾರಿಯಾಗುತ್ತಿಲ್ಲ. ಫಾರಂ ನಂ. 3 ಯಂತಹ ಅರ್ಜಿಗಳ ವಿಲೇವಾರಿಗೆ 6 ತಿಂಗಳಿಗೂ ಹೆಚ್ಚು ಕಾಲ ಪಡೆಯಲಾಗುತ್ತಿದೆ. ಈ ಬಗ್ಗೆ ಜನ ಸಾಮಾನ್ಯರು ಆಯುಕ್ತರ ಗಮನಕ್ಕೆ ತಂದರೆ ಸರಿಪಡಿಸುವ ಎನ್ನುವ ಉತ್ತರ ಬಿಟ್ಟರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಆಯುಕ್ತರ ಮಾತನ್ನು ಸಿಬ್ಬಂದಿಗಳು ಕೇಳುತ್ತಲೇ ಇಲ್ಲವೆಂದು ಅಬ್ದುಲ್ ರಜಾಕ್ ಆರೋಪಿಸಿದ್ದಾರೆ.
ನಿಯಮಕ್ಕೆ ವಿರುದ್ಧವಾಗಿ ಹೆಚ್ಚುವರಿ ತೆರಿಗೆ ವಸೂಲಿ ಮಾಡುತ್ತಿರುವ ಬಗ್ಗೆ ಪತ್ರಿಕೆಗಳು ಗಮನ ಸೆಳೆದಿದ್ದರೂ ಆಯುಕ್ತರು ಮಾತ್ರ ತಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿದ್ದಾರೆ. ತೆರಿಗೆ ಪದ್ಧತಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವಲ್ಲಿಯೂ ನಗರಸಭೆ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಮಡಿಕೇರಿ ನಗರದ ೨೩ ವಾರ್ಡ್‌ಗಳ ಬಗ್ಗೆ ಸರಿಯಾದ ಮಾಹಿತಿಯಲ್ಲದೆ ಆಯುಕ್ತರನ್ನು ಮಳೆ ಹಾನಿ ತಂಡದ ನೋಡಲ್ ಅಧಿಕಾರಿಯನ್ನಾಗಿ ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ. ಆದರೆ ಮಳೆ ವಿಚಾರದಲ್ಲಿ ರೆಡ್ ಅಲರ್ಟ್ ವ್ಯಾಪ್ತಿಗೆ ಒಳಪಡುವ ನಗರಸಭಾ ವ್ಯಾಪ್ತಿಯಲ್ಲಿ ಆಯುಕ್ತರಿಂದ ಕಾರ್ಯನಿರ್ವಹಣೆ ಅಸಾಧ್ಯ ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದು ಕೆ.ಯು.ಅಬ್ದುಲ್ ರಜಾಕ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಆಯುಕ್ತರ ವೈಫಲ್ಯಗಳನ್ನು ಪರಿಗಣಿಸಿ ವಗಾವಣೆಗೆ ಕ್ರಮ ಕೈಗೊಳ್ಳಬೇಕು ಮತ್ತು ನೂತನ ಆಯುಕ್ತರನ್ನಾಗಿ ಕೆಎಎಸ್ ಗ್ರೇಡ್ ೧ ಅಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದ್ದಾರೆ.
ನಗರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರು ಅನುಭವಿಸುತ್ತಿರುವ ಕುಂದುಕೊರತೆಗಳನ್ನು ಆಲಿಸಬೇಕೆಂದು ಅಬ್ದುಲ್ ರಜಾಕ್ ಮನವಿ ಮಾಡಿದ್ದಾರೆ.