ಮಧ್ವಾಚಾರ್ಯರು ವಿಶ್ವಕ್ಕೆ ತತ್ವಜ್ಞಾನ, ಸಿದ್ಧಾಂತ ಕೊಟ್ಟಿದ್ದಾರೆ:ಪೇಜಾವರ ಶ್ರೀ

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣ ಸಮಾಜದ ಗುರುಗಳಾದ ಮಧ್ವಾಚಾರ್ಯರು ವಿಶ್ವಕ್ಕೆ ತತ್ವಜ್ಞಾನ ಸಿದ್ಧಾಂತ ಕೊಟ್ಟಿದ್ದಾರೆ. ವಾದಿರಾಜರು ಸಂಸ್ಕೃತದ ಮೂಲಕ ಧರ್ಮಜಾಗೃತಿ ಮೂಡಿಸಿದ್ದಾರೆ. ಭಗವದ್ಗೀತೆಗೆ ವ್ಯಾಖ್ಯಾನ ಬರೆದು ಜಗತ್ತು ಭಾರತದತ್ತ ತಿರುಗಿ ನೋಡಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.

ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆರಂಭವಾದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತುಳು ಶಿವಳ್ಳಿ ಬ್ರಾಹ್ಮಣರ ಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಈ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಮಧ್ವಾಚಾರ್ಯರು, ವಾದಿರಾಜರು ಹಾಗೂ ವಿಜಯಧ್ವಜರು ತೌಳವ ಪರಂಪರೆಯ ಗುರುಗಳು. ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ದೊಡ್ಡ ಶಕ್ತಿಯಾಗಿ ಬೆಳೆಯಬೇಕು. ಸಮಾಜದ ಸಂಘಟನೆಗೆ ಬಲ ತುಂಬಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು .

ಮನುಷ್ಯ ಜ್ಞಾನ ಸಂಪಾದನೆಯ ಜತೆಗೆ ದಾನ, ಧರ್ಮದಂತಹ ಪುಣ್ಯ ಕಾರ್ಯ ಮಾಡಬೇಕು. ಪುಣ್ಯ ಸಾವಿನ ನಂತರವೂ ಶಾಶ್ವತವಾಗಿರುತ್ತದೆ ಎಂದು ಮಧ್ವಾಚಾರ್ಯರು ಹೇಳಿದ್ದಾರೆ. ಜ್ಞಾನ ಸಂಪಾದನೆ ಹಾಗೂ ಸತ್‌ ಕರ್ಮಗಳಿಗೆ ಸ್ವರ್ಗದಲ್ಲಿಯೂ ಮನ್ನಣೆ ಸಿಗುತ್ತದೆ ಎಂದರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ತುಳು ಶಬ್ದವೇ ಸುಂದರ. ತುಳು ಎಂದರೆ ತುಂಬಿ ತುಳುಕುವುದು ಎಂಬ ಅರ್ಥ. ತುಳು ಭಾಷೆಗೆ ಲಿಪಿ ಇದ್ದು, ಸಾವಿರಾರು ವರ್ಷಗಳ ಹಿಂದೆ ಬರೆದಿರುವ ತುಳು ಲಿಪಿಯ ಗ್ರಂಥ ಇಂದಿಗೂ ಲಭ್ಯವಿದೆ ಎಂದರು.

ತುಳು ಮಲಯಾಳಂ ಲಿಪಿಯಲ್ಲ. ಶಿವಳ್ಳಿ ಬ್ರಾಹ್ಮಣ ಬೇರೆಯವರಿಂದ ಪಡೆಯುವ ಸಮಾಜವಲ್ಲ; ದಾನ ಮಾಡುವ ಸಮಾಜ.  ಕೇರಳದವರಿಗೆ ತುಳು ಲಿಪಿ ಧಾರೆ ಎರೆದಿದ್ದು ನಾವು. ವಿಪರ್ಯಾಸ ಎಂದರೆ ತುಳು ಲಿಪಿಯನ್ನು ನಾವೇ ಮರೆತುಬಿಟ್ಟಿದ್ದೇವೆ ಎಂದರು.

ಶಿವಳ್ಳಿ ಬ್ರಾಹ್ಮಣ ಸಮಾಜ ನೀರಿನಂತೆ, ಹಾಲಿನಂತೆ ಎಲ್ಲಸಮಾಜದೊಂದಿಗೂ ಬೆರೆಯುತ್ತದೆ. ಜತೆಗೆ, ಸ್ವಾಭಿಮಾನಿ ಸಮುದಾಯವಾಗಿದೆ. ಪ್ರಸ್ತುತ ಸಮಾಜ ಕ್ಷೀಣಿಸುತ್ತಿದ್ದು, ಅದರ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದರು.

ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ಸರ್ವಾಂಗೀಣ ಬೆಳವಣಿಗೆಗೆ ಸಮಾಜ ಗಟ್ಟಿಯಾಗಬೇಕು. ಎಲ್ಲ ಕ್ಷೇತ್ರಗಳಲ್ಲಿಯೂ ಶಕ್ತಿ ವೃದ್ಧಿಸಿಕೊಳ್ಳಬೇಕು. ಕೊರತೆಗಳನ್ನು ಸರಿಪಡಿಸಿಕೊಂಡು ಬಲವರ್ಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಆಧ್ಯಾತ್ಮಿಕ, ಧಾರ್ಮಿಕ ವಿಚಾರದಲ್ಲಿ ಸಮಾಜದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಠ, ಮಂದಿರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಿನಿಂದಲೇ ಯೋಚಿಸಬೇಕು. ಸಮಾಜದ ಜನಸಂಖ್ಯೆ ಹೆಚ್ಚಾಗಿ ಎಲ್ಲ ಕ್ಷೇತ್ರ
ಗಳಿಗೂ ವ್ಯಾಪಿಸಬೇಕು. ಆಗ ಮಾತ್ರ ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ಗಟ್ಟಿಕೊಳ್ಳಲು ಸಾಧ್ಯ ಎಂದರು.

ಸಮ್ಮೇಳನದ ಅಧ್ಯಕ್ಷರಾದ ರಾಮದಾಸ್ ಮಡಮಣ್ಣಾಯ, ಬಾಲಕೃಷ್ಣ ಮುಡಂಬಡಿತ್ತಾಯ, ಗಿರಿರಾಜನ್‌, ರಾಮದಾಸ ಭಟ್‌, ಪ್ರಧಾನ ಸಂಚಾಲಕ ಎಂ.ಬಿ.ಪುರಾಣಿಕ್‌, ಗೋಪಾಲ ಮೊಗೇರಾಯ, ಮಂಜುನಾಥ್ ಉಪಾಧ್ಯಾಯ, ಹರಿಕೃಷ್ಣ ಪುನರೂರು, ವೆಂಕಟರಮಣ ಪೋತಿ ಇದ್ದರು.

‘ಪಲಿಮಾರು ಶ್ರೀ ಅಸಮಾಧಾನ’

ಅನ್ಯ ಸಮಾಜದ ಕಾರ್ಯಕ್ರಮ ನಡೆದರೆ ಸಮಾಜದ ರಾಜಕೀಯ ನಾಯಕರು ತಪ್ಪದೆ ಭಾಗವಹಿಸುತ್ತಾರೆ. ಶಾಸಕರಿಂದ ಮುಖ್ಯಮಂತ್ರಿವರೆಗೆ ಹಾಜರಿರುತ್ತಾರೆ. ಆದರೆ, ನಮ್ಮ ಸಮಾಜದ ಶಾಸಕರು ಬರಲಿಲ್ಲ ಎಂದಾದರೆ ಏನೂ ಕೊರತೆ ಇದೆ ಎಂಬುದು ತಿಳಿಯುತ್ತದೆ. ನಮ್ಮ ದೌರ್ಬಲ್ಯ, ಕೊರತೆ ಅರಿಯಬೇಕು. ಮುಂದಿನ ವರ್ಷ ಮತ್ತೊಂದು ಸಮ್ಮೇಳನವನ್ನು ಆಯೋಜಿಸಿ, ಮುಖ್ಯಮಂತ್ರಿಗಳನ್ನು ಕರೆತರಬೇಕು. ನಮ್ಮದು ಚಿಕ್ಕ ಸಮಾಜವಾದರೂ ಸಾಮಾನ್ಯ ಸಮಾಜ ಅಲ್ಲ. ಪೇಜಾವರ ಶ್ರೀ ತ್ರಿವಿಕ್ರಮ ಸಾಮರ್ಥ್ಯ ಸಮಾಜಕ್ಕಿದೆ ಎಂದು ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಹೇಳಿದರು. 

ಅದ್ಧೂರಿ ಮೆರವಣಿಗೆ

ಸಮ್ಮೇಳಕ್ಕೂ ಮುನ್ನ ಬೆಳಿಗ್ಗೆ ತುಳು ಶಿವಳ್ಳಿ ಮಹಿಳೆಯರಿಂದ ರಥಬೀದಿಯಲ್ಲಿ ಲಕ್ಷ್ಮೀ ಶೋಭಾನೆ ನಡೆಯಿತು. ಬಳಿಕ ಸಂಸ್ಕೃತ ಮಹಾಪಾಠ
ಶಾಲೆಯಿಂದ ರಾಜಾಂಗಣದವರೆಗೂ ಮೆರವಣಿಗೆ ನಡೆಯಿತು.



Leave a Reply

Your email address will not be published. Required fields are marked *

error: Content is protected !!