ಕಡಿಮೆ ವೆಚ್ಚದಲ್ಲಿ ಮಳೆಕೊಯ್ಲು ಪದ್ದತಿ; ಜಲಜಾಗೃತಿಗೆ ಮುನ್ನುಡಿ ಬರೆದ ಮರ್ಣೆ ಗ್ರಾಮ ಪಂಚಾಯತ್

ಕಾರ್ಕಳ ವರ್ಷದಿಂದ ವರ್ಷಕ್ಕೆ ತೀವ್ರ ಪ್ರಮಾಣದಲ್ಲಿ ಅಂತರ್ಜಲ ಕುಸಿಯುತ್ತಿರುವ ಪರಿಣಾಮ ಕುಡಿಯಲೂ ನೀರಿಲ್ಲದ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಜಲಸಂರಕ್ಷಣೆಗೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ಕಡ್ಡಾಯ ಮಳೆಕೊಯ್ಲು ಪದ್ದತಿ ಅಳವಡಿಕೆಗೆ ಮುಂದಾಗಿದೆ. ಕೇವಲ 4 ಸಾವಿರ ವೆಚ್ಚದಲ್ಲಿ 2 ವಿಧದ ಅತ್ಯಂತ ಸರಳ ತಂತ್ರಜ್ಞಾನದ ಅಳವಡಿಸುವ ಮೂಲಕ ಹೇಗೆ ನೀರನ್ನು ಮರುಪೂರಣ ಮಾಡಬಹುದೆನ್ನುವ ಕುರಿತು ಜನರಲ್ಲಿ ಜಲಜಾಗೃತಿ ಮೂಡಿಸಿದ್ದು,  ಮರ್ಣೆ ಪಂಚಾಯಿತಿಯ ದಿಟ್ಟ ಹೆಜ್ಜೆಯಿಟ್ಟಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಈ ಬಾರಿ ಕರಾವಳಿಯ ಜನರು ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬೇಸಗೆಯಲ್ಲಿ ಜನರಿಗೆ ನೀರು ಪೂರೈಕೆ ಮಾಡುವುದೇ ಅತಿದೊಡ್ಡ ಸವಾಲಾಗಿ ಪರಿಣಮಿಸಿತ್ತು. ಯಾಕಂದರೆ ಹಲವೆಡೆ ನೀರುಪೂರೈಕೆ ಜಲಮೂಲಗಳೇ ಸಿಗದಂತಹ ದುಸ್ಥಿತಿ ಎದುರಾಗಿತ್ತು. ಇದನ್ನರಿತ ಮರ್ಣೆ ಗ್ರಾಮ ಪಂಚಾಯತ್ ಆಡಳಿತ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಬಲ್ಲ ಮಳೆನೀರು ಕೊಯ್ಲು ವಿಧಾನವನ್ನು ಕಡ್ಡಾಯ ಅನುಷ್ಟಾನಕ್ಕೆ ಮುಂದಾಗಿದೆ.ಸರಳ ತಂತ್ರಜ್ಞಾನದ ಮೂಲಕ ಬಡವರೂ ಕೂಡ ಅತೀ ಕಡಿಮೆ ವೆಚ್ಚದಲ್ಲೂ ಮಳೆ ನೀರನ್ನು ಭೂಮಿಯಲ್ಲಿ ಮರುಪೂರಣ ಮಾಡಬಹುದಾಗಿದೆ.

ಭವಿಷ್ಯದಲ್ಲಿ ಉಂಟಾಗುವ ಜಲಕ್ಷಾಮದ ಬಗ್ಗೆ ಎಚ್ಚೆತ್ತ ಮರ್ಣೆ ಪಂಚಾಯತ್ ಆಡಳಿತ ಮಳೆನೀರು ಕೊಯ್ಲಿನ ಬಗ್ಗೆ ವಿಶೇಷ ಮುತುವರ್ಜಿವಹಿಸಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ಹೊಸ ಕಟ್ಟಡಗಳ ನಿರ್ಮಾಣಗೊಂಡರೂ ಮಳೆ ಕೊಯ್ಲು ಪದ್ಧತಿ ಅನುಷ್ಟಾನ ಕಡ್ಡಾಯವಾಗಲಿದೆ. ಪಂಚಾಯಿತಿ ನಿಯಮ ಉಲ್ಲಂಘಿಸಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿಲ್ಲವಾದರೆ ಯಾವುದೇ ಕಾರಣಕ್ಕೂ ಕಟ್ಟಡ ಪರವಾನಿಗೆ ಸಿಗುವುದಿಲ್ಲ.

ಮರ್ಣೆ ಗ್ರಾಮದ ಕೈಕಂಬ ಎಂಬಲ್ಲಿ ಸಂತೋಷ್ ಪೂಜಾರಿ ಎಂಬವರು ಪಿವಿಸಿ ಪೈಪ್ ಬಳಸಿ ತಮ್ಮ ಮನೆಯ ಕಟ್ಟಡದಿಂದ ಬಿದ್ದ ಮಳೆ ನೀರನ್ನು ಪಿವಿಸಿ ಪೈಪ್ ಹಾಗೂ ಅದಕ್ಕೆ ಮರಳು ಹಾಗೂ ಜಲ್ಲಿಯ ಮೂಲಕ ನೀರನ್ನು ಫಿಲ್ಟರ್ ಮಾಡಿ ಬಳಿಕ ಈ ನೀರನ್ನು ನೇರವಾಗಿ ಬಾವಿಗೆ ಬಿಡುವ ಮೂಲಕ ಕೇವಲ 4 ಸಾವಿರ ಖರ್ಚಿನಲ್ಲಿ ಅಂತರ್ಜಲ ಮರುಪೂರಣ ಮಾಡಿದ್ದಾರೆ. ಇದಲ್ಲದೇ ಪಿವಿಸಿ ಪೈಪು ಹಾಗೂ ಪ್ಲಾಸ್ಟಿಕ್ ಬ್ಯಾರೆಲ್ ಬಳಸಿ ನೀರನ್ನು ಶುದ್ದೀಕರಿಸಿ ಬಾವಿಗೆ ಬಿಡುವ ವಿಧಾನವನ್ನೂ ಅಳವಡಿಸಬಹುದಾಗಿದೆ.

ಪ್ಲಾಸಿಕ್ ಬ್ಯಾರೆಲ್‌ಗೆ 3 ಪದರಗಳಲ್ಲಿ ಜಲ್ಲಿ ತುಂಬಿಸಿ, ಅದಕ್ಕೆ ಮೇಲ್ಪದರದಲ್ಲಿ ಇದ್ದಿಲು ತುಂಬಿಸಿ ಬಳಿಕ ಪ್ಲಾಸಿಕ್ ನೆಟ್ ಹಾಕಿ ಸ್ವಲ್ಪ ಮರಳನ್ನು ಹರಡಬೇಕು,ಇದಕ್ಕೆ ಮನೆಯ ಮಾಡಿನ ನೀರನ್ನು ಪೈಪ್ ಮೂಲಕ ಹಾಯಿಸಿ ಅದು ಫಿಲ್ಟರ್ ಆದ ಬಳಿಕ ಅದನ್ನು ಬಾವಿಗೆ ಬಿಡಬಹುದಾಗಿದೆ. ಇಂತಹ ವಿಧಾನಕ್ಕೆ ತಗಲುವ ಖರ್ಚು ಕೇವಲ 2 ರಿಂದ 3 ಸಾವಿರ ಮಾತ್ರ. ಇಂತಹ ಸರಳ ವಿಧಾನದ ಮೂಲಕವೂ ಮಳೆನೀರನ್ನು ಸದ್ಭಳಕೆ ಮಾಡಬಹುದಾಗಿದೆ.

ಭೀಕರ ಬರಗಾಲದಿಂದ ಮುಂದಿನ ದಿನಗಳಲ್ಲಿ ಕುಡಿಯಲೂ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಈ ಬಾರಿಯ ಬರಗಾಲದ ತೀವೃತೆಯನ್ನು ಅರಿತು ಕಳೆದ 3 ತಿಂಗಳ ಹಿಂದೆಯೇ ಈ ಕುರಿತು ಯೋಜನೆ ಸಿದ್ಧಪಡಿಸಲಾಗಿತ್ತು. ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯ ಮಳೆನೀರು ಕೊಯ್ಲು ಅನುಷ್ಠಾನವಾಗಲಿದ್ದು ಇನ್ನುಳಿದ ಪಂಚಾಯಿತಿಗಳೂ ಕೂಡಾ ಕಡ್ಡಾಯವಾಗಿ ಅನುಷ್ಟಾನಗೊಳಿಸಿದ್ದಲ್ಲಿ ನಿಶ್ಚಿತವಾಗಿಯೂ ಜಲಕ್ಷಾಮ ನೀಗಲಿದೆ. ಅತ್ಯಂತ ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ಇದನ್ನು ಅಳವಡಿಸಬಹುದಾಗಿದ್ದು, ಪಂಚಾಯತಿಯ ಈ ಯೋಜನೆಗೆ ಎಲ್ಲರೂ ಕೈಜೋಡಿಸಬೇಕಿದೆ.  ನೀರಿನ ಅಭಾವ ನೀಗಿಸಲು ಮಳೆನೀರು ಕೊಯ್ಲು ಅನಿವಾರ್ಯ ಎಂದು ಮರ್ಣೆ ಪಂಚಾಯಿತ್ ಅಧ್ಯಕ್ಷರಾದ ದಿನೇಶ್ ಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!