ಲಾಕ್ ಡೌನ್- ಬ್ಯಾಂಕುಗಳು ಸಾಲ ವಸೂಲಿ ಹಾಗೂ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲ- ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು – ಬ್ಯಾಂಕುಗಳು ಸಾಲಗಾರರರಿಂದ ಸಾಲ ವಸೂಲಿ ಹಾಗೂ ಅವರ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲ’ ಎಂದು ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ.
ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕಿನವರು ತಮ್ಮ ಆಸ್ತಿ ಹರಾಜು ಹಾಕಲು ಮುಂದಾದ ಕ್ರಮ ಪ್ರಶ್ನಿಸಿ ಮುದ್ದಯ್ಯ ಅಮರಯ್ಯ ಹಿರೇಮಠ ಮತ್ತಿತರರು ಸಲ್ಲಿಸಿದ್ದ ಐದು ಪ್ರತ್ಯೇಕ ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಬಹುದಾಗಿದೆ ಎಂದೂ ನ್ಯಾಯಪೀಠ ನಿರ್ದೇಶಿಸಿದೆ.
ಕೊರೋನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಈ ಸಂದರ್ಭದಲ್ಲಿ ಬ್ಯಾಂಕಿನವರು ನಮ್ಮ ಆಸ್ತಿ ಹರಾಜು ಮಾಡಲು ಮುಂದಾಗಿರುವುದು ಸಮಂಜಸವಲ್ಲ. ಹೀಗಾಗಿ ಹರಾಜು ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಸರ್ಕಾರ ಕೆಲವೊಂದು ಅಗತ್ಯ ಸೇವೆ ಕಲ್ಪಿಸಲು ಅನುಮತಿ ನೀಡಿದೆ. ಆದರೆ, ಸಾಲ ವಸೂಲಾತಿ ಮತ್ತು ಸಾಲಗಾರರ ಆಸ್ತಿ ಹರಾಜು ಹಾಕುವುದಕ್ಕೆ ಅನುಮತಿ ನೀಡಿಲ್ಲ. ಇದರಿಂದಾಗಿ ಸಾಲ ವಸೂಲಾತಿ ಮತ್ತು ಸಾಲಗಾರರ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವುದು ಆದೇಶದ ಉಲ್ಲಂಘನೆ’ ಎಂದು ಅಭಿಪ್ರಾಯಪಟ್ಟಿದೆ.
ಲಾಕ್‌ಡೌನ್ ಆದೇಶ ಹಿಂಪಡೆಯುವವರೆಗೆ ಸಾಲ ವಸೂಲಾತಿ ಹಿನ್ನೆಲೆಯಲ್ಲಿ ಸಾಲಗಾರರ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲ ಎಂದು ನಿರ್ದೇಶಿಸಿದೆ.
ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಕಳುಹಿಸಿಕೊಡುವಂತೆ ರಿಜಿಸ್ಟ್ರಾರ್ ಅವರಿಗೆ ಸೂಚಿಸಿದೆ.