ಮೇ 15ರವರೆಗೆ ಲಾಕ್ ಡೌನ್ ಮುಂದುವರಿಕೆ ಸಾಧ್ಯತೆ: ಬಿಎಸ್ ಯಡಿಯೂರಪ್ಪ
ಬೆಂಗಳೂರು: ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಅನ್ನು ಮೇ.15ರ ವರೆಗೆ ಮುಂದುವರೆಸಬೇಕಾಗಬಹುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ನಡೆಸಿದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು. ಬಳಿಕ ಯಡಿಯೂರಪ್ಪ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ಕೊರೋನಾ ನಿಯಂತ್ರಣ ಲಾಕ್ ಡೌನ್ ಪರಿಸ್ಥಿತಿ ರಾಜ್ಯದ ಸ್ಥಿತಿಗತಿಗಳ ಬಗ್ಗೆ ವಿಡಿಯೋ ಸಂವಾದ ನಡೆಸಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.ರಾಜ್ಯದಲ್ಲಿ ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮಕೈಗೊಂಡಿದ್ದೇವೆ. ಮುಂದೆಯೂ ಇವುಗಳನ್ನು ವಿಸ್ತರಿಸುತ್ತೇವೆ. ಹೀಗಾಗಿ ಮೇ 3ರ ಬಳಿಕವೂ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದರು.
ಮೇ 15ರ ವರೆಗೂ ಲಾಕ್‌ಡೌನ್ ಇರಲಿದೆ. ಇನ್ನೂ ವಲಯವಾರು ವಿನಾಯಿತಿ ಬೇಕು ಎಂಬ ರಾಜ್ಯ ಸರ್ಕಾರದ ಅಭಿಪ್ರಾಯಕ್ಕೆ ತಕ್ಷಣಕ್ಕೆ ಪ್ರಧಾನಿ ಕಡೆಯಿಂದ ಯಾವುದೇ ಉತ್ತರ ಇಲ್ಲ. ಆದರೆ, ಮೋದಿ ಅವರ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಇದೆ ಎಂದರು.
ಸಚಿವರಾದ ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಕೆ ಸುಧಾಕರ್, ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಉಪಸ್ಥಿತರಿದ್ದರು.