ಮೇ 4ರ ನಂತರ ಕಂಟೈನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದೆಡೆಗೆ ಗುಡ್ ನ್ಯೂಸ್ ಮುಖ್ಯಮಂತ್ರಿ

ಬೆಂಗಳೂರು: ರಾಜ್ಯದ  ಕಂಟೈನ್ ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ  ಮೇ 4ರ ನಂತರ ಲಾಕ್ ಡೌನ್ ಸಡಿಲಿಕೆ ಬಗ್ಗೆ ಕೇಂದ್ರದಿಂದ ಸ್ಪಷ್ಟ ಮಾಹಿತಿ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿ, ಕೊರೋನಾ ಸೋಂಕು ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ಮೇ 4ರ ಬಳಿಕವೂ ಲಾಕ್ ಡೌನ್ ಮುಂದುವರೆಯಲಿದೆ. ಆದರೆ, ಉಳಿದ ವಲಯಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತಿದೆ.ಈ ಸಂಬಂಧ ಕೇಂದ್ರ ಸರ್ಕಾರದಿಂದ ಸ್ಪಷ್ಟ ಮಾಹಿತಿ ದೊರೆತಿದೆ. ಸದ್ಯದಲ್ಲಿಯೇ ಮಾರ್ಗಸೂಚಿಗಳು ಸಿಗಲಿವೆ ಎಂದರು.

ಮೇ ನಾಲ್ಕರ ನಂತರ ಪ್ರಧಾನಿ ಮೋದಿ ಮತ್ತೆ ಲಾಕ್ ಡೌನ್ ಸಡಿಲಿಕೆ ಬಗ್ಗೆ ತಿಳಿಸಲಿದ್ದಾರೆ. ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಮೇ ನಾಲ್ಕರಿಂದ ಗ್ರೀನ್ ಜೋನ್ ಗಳಲ್ಲಿ ಕಾರ್ಖಾನೆ ಆರಂಭವಾಗಲಿದೆ. ಈ ಬಗ್ಗೆ ಇಂದು ಸಂಜೆ ಪ್ರಮುಖ ಕೈಗಾರಿಕೋದ್ಯಮಿಗಳ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನೂ ಎರಡ್ಮೂರು ತಿಂಗಳು ಲಾಕ್ ಡೌನ್ ಮುಂದುವರಿದರೂ ಆಶ್ಚರ್ಯಪಡಬೇಕಿಲ್ಲ. ನಾಲ್ಕನೇ ತಾರೀಖಿನ ನಂತರ ಪ್ರಧಾನಿ ಮೋದಿ ಕೆಲವು ಸೂಚನೆಗಳನ್ನು ಕೊಡಲಿದ್ದಾರೆ. ಅದಾದ ಬಳಿಕ ಹಂತ ಹಂತವಾಗಿ ನಿರ್ಬಂಧ ಸಡಿಲಿಕೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ಮಾಲ್ ಗಳನ್ನು ತೆರೆಯುವ ಬಗ್ಗೆ ತೀರ್ಮಾನ ಆಗಿಲ್ಲ. ಮೇ ಪ್ರಥಮ ವಾರ ನಂತರ ತೀರ್ಮಾನ ಕೈಗೊಳ್ಳುತ್ತೇವೆ. ನಮಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿದೆ. ಬೆಂಗಳೂರಿನ ಸುತ್ತಮುತ್ತ ಕೈಗಾರಿಕೆಗಳನ್ನು ಆರಂಭಿಸಲು ಅನುಕೂಲ ಮಾಡಿಕೊಡುತ್ತೇವೆ ಎಂದರು. 

 ಸಾರ್ವಜನಿಕರು ಕರ್ಫ್ಯೂ ಪಾಲನೆ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಇವರ ಕೊಡುಗೆ ಅಪಾರ. ಮಾಧ್ಯಮಗಳು ಕೂಡ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅದಕ್ಕಾಗಿ ಸರ್ಕಾರದ ವತಿಯಿಂದ ಧನ್ಯವಾದ ಅರ್ಪಿಸುತ್ತೇನೆ. ಕೊರೋನಾದಿಂದ ಖಿನ್ನತೆಗೆ ಒಳಾದವರ ಬಗ್ಗೆ ಸುದ್ದಿ ಪ್ರಕಟಿಸದೆ, ಕೊರೋನಾದಿಂದ ಗುಣಮುಖರಾಗಿ ಬಂದವರ ಆತ್ಮಸ್ಥೈರ್ಯವನ್ನು ಪ್ರಸಾರ ಮಾಡಬೇಕಾಗಿ ಮನವಿ ಮಾಡುತ್ತೇನೆ ಎಂದು ಮನವಿ ಮಾಡಿದರು.

ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ. ಸೋಂಕಿನಿಂದ ಚೇತರಿಕೆ ಆಗಿರುವವರು ಇತರರಿಗೆ ಧೈರ್ಯ ತುಂಬಬೇಕು. ವಾರಿಯರ್ಸ್ ಗಳು ಆತ್ಮಸ್ಥೈರ್ಯ ತುಂಬಬೇಕು. ಎಲ್ಲರೂ ಒಗ್ಗೂಡಿ ಇದನ್ನು ಹೋಗಲಾಡಿಸಲು ಶ್ರಮಿಸೋಣ ಎಂದು ಹೇಳಿದರು.

ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ರಾಜ್ಯಕ್ಕೆ ಹೊಸ ಮರಳು ನೀತಿ ಜಾರಿಗೆ ಅನುಮೋದನೆ ನೀಡಲಾಗಿದೆ.ಈಗಿರುವ ನೀತಿಯಲ್ಲಿ ನದಿ ಪಾತ್ರಗಳಲ್ಲಿ ಕೆಲವು ಬ್ಲಾಕ್‌ಗಳನ್ನು ಗುರುತಿಸಿ ಹರಾಜು ಹಾಕುವ ಪದ್ದತಿ ಈಗ ಅಸ್ತಿತ್ವದಲ್ಲಿತ್ತು.ಪಟ್ಟಾ ಲ್ಯಾಂಡ್‌, ಕೆರೆ, ಹಳ್ಳ ಕೊಳ್ಳದ ಪ್ರದೇಶದಲ್ಲಿ ಮರಳು ಇದ್ದರೆ ಆ ಗ್ರಾಮ ಪಂಚಾಯತ್ ಅದನ್ನು ಗುರುತಿಸಿ ಸ್ಥಳೀಯವಾಗಿ 100 ಮೆಟ್ರಿಕ್ ಟನ್‌ಗೆ 700 ರೂಪಾಯಿಯಂತೆ ಕೊಡಬಹುದು. ತಾಲೂಕಿನ ದಂಡಾಧಿಕಾರಿ ಮತ್ತು ಎಡಬ್ಲ್ಯು ಅವರು ಸಮನ್ವಯ ಮಾಡಲಿದ್ದಾರೆ ಎಂದು ತಿಳಿಸಿದರು.ಇದರಿಂದ ಮರಳು ದಂಧೆ ಕಡಿವಾಣ ಹಾಕಲು ಈ ನೀತಿ ತರಲಾಗುತ್ತಿದೆ. 130 ಕೋಟಿ ರೂ. ಬರುವ ಕಡೆ ಇನ್ನೂ60-70 ಕೋಟಿ ರೂ. ಬರುವ ನಿರೀಕ್ಷೆ ಇದೆ ಎಂದರು.

ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಅಂತರ್ ರಾಜ್ಯ ವಾಹನ ಸಂಚಾರಕ್ಕೆ ಅನುವು ಮಾಡಲು ನಿರ್ಧರಿಸಲಾಗಿದೆ. ಇಂದಿನಿಂದಲೇ ಅಂತಾರಾಜ್ಯ ವಾಹನ ಸಂಚಾರ ಆರಂಭವಾಗಲಿದೆ. ಪೊಲೀಸರಿಗೆ, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಅನುವು ಮಾಡಿಕೊಟ್ಟಿದ್ದೇವೆ. ಅಗತ್ಯಬಿದ್ದರೆ ಹೊರ ರಾಜ್ಯಕ್ಕೆ ಹೋಗುವವರಿಗೆ ಬಸ್ ಸೌಲಭ್ಯವನ್ನು ಕಲ್ಪಿಸಲಾಗುವುದು. ಅಂತರ್ ಜಿಲ್ಲೆ, ಅಂತರ್ ರಾಜ್ಯ ಎರಡಕ್ಕೂ ನಾಳೆಯಿಂದ ವಿನಾಯಿತಿ ನೀಡಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

ಲಾಕ್‌ಡೌನ್ ಸಂದರ್ಭದಲ್ಲಿ ಹೇರ್ ಕಟಿಂಗ್ ಸಲೂನ್, ಬಾರ್ ಅಂಗಡಿಗಳಿಗೆ ಮೇ ಮೂರರ ವರೆಗೂ ನಿರ್ಬಂಧ ಮುಂದುವರಿಯಲಿವೆ. ಮದ್ಯದಂಗಡಿ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ, ಕೆಂಪು ವಲಯ ಬಿಟ್ಟು ಎಲ್ಲಾ ಕಡೆ ಕಾರ್ಖಾನೆಗಳು ಆರಂಭಕ್ಕೆ ಸೂಚನೆ ನೀಡಲಾಗಿದೆ.ಹೊರ ರಾಜ್ಯಕ್ಕೆ ಹೋಗಬೇಕಾದವರಿಗೆ ಪರವಾನಗಿ ನೀಡಲಾಗುವುದು. ಹೊರ ರಾಜ್ಯದಿಂದ ಬರುವವರು ಕೂಡ ವೈದ್ಯಕೀಯ ಪರೀಕ್ಷೆ ನಡೆಸಿಕೊಂಡು ಬರಬೇಕಾಗುತ್ತದೆ. ದಿನಕ್ಕೆ ಒಂದು ಬಾರಿ ಮಾತ್ರ ಬಸ್ ಸೌಲಭ್ಯವಿರಲಿದೆ ಎಂದು ಮಾಧುಸ್ವಾಮಿ ಹೇಳಿದರು

Leave a Reply

Your email address will not be published. Required fields are marked *

error: Content is protected !!