ಲಾಕ್ ಡೌನ್ ಆದೇಶ ಪಾಲಿಸಿ, ಇಲ್ಲವೇ ಕಂಡಲ್ಲಿ ಗುಂಡಿಕ್ಕಲು ಆದೇಶ: ಸಿಎಂ ಕೆಸಿಆರ್ ಎಚ್ಚರಿಕೆ!
ಹೈದರಾಬಾದ್: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲೇ ಇರಿ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೀದಿಗಿಳಿದರೆ ಅಥವಾ ಪರಿಸ್ಥಿತಿ ಕೈ ಮೀರುವ ಪರಿಸ್ಥಿತಿ ಬಂದರೆ ಕಂಡಲ್ಲಿ ಗುಂಡಿಡುವಂತೆ ಪೊಲೀಸರಿಗೆ ಆದೇಶ ನೀಡಬೇಕಾಗುತ್ತದೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ಗೆ ಆದೇಶ ನೀಡಿದ್ದು, ಈ ಅವಧಿಯಲ್ಲಿ ಯಾರೂ ಕೂಡ ಹೊರಗೆ ಬಾರದಂತೆ ಮನವಿ ಮಾಡಿದ್ದರು. ಆದರೆ ಲಾಕ್ ಡೌನ್ ಇದ್ದರೂ ತೆಲಂಗಾಣದಲ್ಲಿ ಜನರ ಜಮಾವಣೆ ಎಥೇಚ್ಛವಾಗಿದ್ದು, ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಈ ಕುರಿತ ಕಿಡಿಕಾರಿರುವ ಸಿಎಂ ಕೆಸಿಆರ್, ಕೋವಿಡ್ 19 ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಜನರು ಒಂದು ವೇಳೆ ಲಾಕ್ ಡೌನ್ ಉಲ್ಲಂಘಿಸುವುದನ್ನು ಮುಂದುವರಿಸಿದಲ್ಲಿ ಸರ್ಕಾರ ರಾಜ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಿ, ಕಂಡಲ್ಲಿ ಗುಂಡು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಲಾಕ್ ಡೌನ್ ಜಾರಿಯಾದರೂ ಜನರನ್ನು ನಿಯಂತ್ರಿಸಲು ಸೇನೆಯನ್ನು ಕರೆಯಲಾಗಿತ್ತು. ಒಂದು ವೇಳೆ ಜನರು ಲಾಕ್ ಡೌನ್ ಆದೇಶ ಪಾಲಿಸದೇ ಪರಿಸ್ಥಿತಿ ಕೈಮೀರುವಂತೆ ಮಾಡಿದಲ್ಲಿ 24ಗಂಟೆಯೂ ಕರ್ಫ್ಯೂ ವಿಧಿಸಿ ಕಂಡಲ್ಲಿ ಗುಂಡು ಹೊಡೆಯುವ ಆದೇಶ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾನು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಅಂತಹ ಸ್ಥಿತಿಗೆ ಅವಕಾಶ ಕೊಡಬೇಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಚಂದ್ರಶೇಖರ್ ಈ ಎಚ್ಚರಿಕೆ ನೀಡಿದ್ದಾರೆ.