ರಾಜ್ಯದಲ್ಲಿ ಲಾಕ್‌ಡೌನ್ ಮೇ 3ರವರೆಗೆ ವಿಸ್ತರಣೆ: 5 ಹೊಸ ಪಾಸಿಟಿವ್ ಪತ್ತೆ, ಸೋಂಕು 395ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಅನ್ನು ಮೇ 3 ರ ವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಐಟಿ, ಬಿಟಿ, ಗ್ರಾಮಾಂತರ ಪ್ರದೇಶದಲ್ಲಿ ನಿರ್ಬಂಧ ಸಡಿಲಿಕೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಒಂದು ವೇಳೆ ಕೇಂದ್ರ ಸರ್ಕಾರ ಸಡಿಲಿಕೆಗೆ ನಿರ್ದೇಶನ ನೀಡಿದರೆ, ಆ ಬಗ್ಗೆ ಮುಖ್ಯಮಂತ್ರಿ ನೇತೃತ್ವದ ಟಾಸ್ಕ್ ಫೋರ್ಸ್ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಜಾರಿಗೆ ಪೂರ್ವಭಾವಿಯಾಗಿ ಸುಗ್ರೀವಾಜ್ಞೆ ಇಂದಿನಿಂದಲೇ ಜಾರಿಗೆಯಾಗಲಿದೆ. ಆಶಾ ಕಾರ್ಯಕರ್ತರು, ಪೊಲೀಸರು, ವೈದ್ಯರ ಕಾರ್ಯಾಚರಣೆಗೆ ಅಡ್ಡಿ ಪಡಿಸುವವರಿಗೆ ಮತ್ತು ಉದ್ದೇಶ ಪೂರ್ವಕವಾಗಿ ಸೋಂಕು ಹರಡುವವರ ವಿರುದ್ಧ ಗುಂಡಾಕಾಯ್ದೆ ಪ್ರಯೋಗಿಸಲಾಗುವುದು. ಆಸ್ತಿ ಮುಟ್ಟುಗೋಲಿಗೂ ಅವಕಾಶವಿದೆ ಎಂದು ಮಾಧುಸ್ವಾಮಿ ತಿಳಿಸಿ. ರಾಜ್ಯದಲ್ಲಿ ಮತ್ತೆ ಐದು ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ. |