ಏಪ್ರಿಲ್ 30 ರವರೆಗೆ ಲಾಕ್ ಡೌನ್ ವಿಸ್ತರಣೆ – ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು (ಉಡುಪಿ ಟೈಮ್ಸ್ ವರದಿ ) – ಕರೋನ ಎಮರ್ಜೆನ್ಸಿ ಲಾಕ್ ಡೌನ್ ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ದೇಶಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸತತ ಮೂರ್ನಾಲ್ಕು ಗಂಟೆಗಳ ಕಾಲ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ನಮ್ಮ ನಿರ್ಧಾರವೂ ಇದೇ ಆಗಿತ್ತು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಮೀನುಗಾರಿಕೆ ಹಾಗೂ ಮೀನು ಸಂಸ್ಕರಣಾ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು ಕರಾವಳಿಗರು ನಿಟ್ಟುಸಿರು ಬಿಡುವಂತಾಗಿದೆ. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗಳಿಗೆ ವಸ್ತುಗಳು ಮಾರಾಟವಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಸಡಿಲಗೊಳಿಸಬಾರದು, 15 ದಿನ ಲಾಕ್‌ಡೌನ್ ಅನಿವಾರ್ಯ ಒಂದೆರೆಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ತಿಳಿಸುವುದಾಗಿ ಮೋದಿ ಹೇಳಿರುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಈ ಬಾರಿಯ ಲಾಕ್‌ಡೌನ್ ವಿಭಿನ್ನವಾಗಿದೆ. ಭಾಗಶಃ ಸರ್ಕಾರಿ ಕಚೇರಿಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ. ಅದಕ್ಕೂ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.