ಸಮಾಜಕ್ಕೆ ಹಿತವನ್ನುಂಟು ಮಾಡುವ ಹೊಣೆ ಸಾಹಿತ್ಯಕ್ಕಿದೆ: ತಾರಾ ಆಚಾರ್ಯ
ಉಡುಪಿ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಇದರ ಅಂಗ ಸಂಸ್ಥೆಯಾದ ಉಡುಪಿ ಇನ್ಸ್ಟ್‌ಟ್ಯೂಟ್ ಆಫ್ ಹೋಟೇಲ್ ಆಂಡ್ ಟೂರಿಸಂ ಸೈನ್ಸ್ ಇದರ ಕಲಾ ಸಾಹಿತ್ಯ ಸಂಘದ ಸಹಯೋಗದಲ್ಲಿ ಪ್ರಮೋದ ಸಾಹಿತ್ಯ ಅಧ್ಯಯನ ಕೇಂದ್ರವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ತಾರಾ ಉಮೇಶ್ ಆಚಾರ್ಯ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಈ ಅಧ್ಯಯನ ಕೇಂದ್ರಕ್ಕೆ ತನ್ನ ನಾಲ್ಕೂ ಕೃತಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯಿಂದ ಬಹುಮಾನಗಳನ್ನು ಪಡೆದ ತುಳುನಾಡಿನ ಹಿರಿಯ ಸಾಹಿತಿ ದಿವಂಗತ ಪ್ರಮೋದ ಕೆ. ಸುವರ್ಣ ಅವರ ಹೆಸರನ್ನಟ್ಟಿರುವುದು ಅತ್ಯಂತ ಪ್ರಶಂಸನೀಯ. ಇದು ಓರ್ವ ಹಿರಿಯ ಮಹಿಳಾ ಸಾಹಿತಿಗೆ, ಅವರ ಭಾಷಾಪ್ರೇಮಕ್ಕೆ, ಅವರ ಶ್ರಮಕ್ಕೆ ಸಲ್ಲಿಸಿದ ಗೌರವ ಎಂದರು. ಪ್ರಮೋದ ಎಂದರೆ ಹಿತ ಅಥವಾ ಖುಷಿ ಅನ್ನುವ ಅರ್ಥವನ್ನು ಕೊಡುತ್ತದೆ. ಸಾಹಿತ್ಯದ ಉದ್ದೇಶವೂ ಓದುಗನ ಮನಸ್ಸಿಗೆ ಹಿತವನ್ನು ನೀಡುವುದೇ ಆಗಿದೆ. ಸಮಾಜದ ನೋವುನಲಿವುಗಳಿಗೆ ಸ್ಪಂದಿಸಿ, ಹಿತವನ್ನುಂಟು ಮಾಡುವ ದೊಡ್ಡ ಜವಾಬ್ದಾರಿ ಸಾಹಿತ್ಯಕ್ಕಿದೆ ಎಂದಭಿಪ್ರಾಯಪಟ್ಟರು.
ಯುವ ಜನತೆ ತುಳುವನ್ನು ಸಂವಿಧಾನದ ೮ನೇ ಪರಿಚ್ಛೇಧಕ್ಕೆ ಸೇರಿಸುವ ಹೋರಾಟದಲ್ಲಿ ಕೈಜೋಡಿಸಬೇಕು ಎಂದವರು ಆಶಿಸಿದರು. ಮುಖ್ಯ ಅತಿಥಿಯಾಗಿದ್ದ ಟಿ.ವಿ. ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್, ತುಳುವಿನಲ್ಲಿ ಅಗಾಧವಾದ ಶಬ್ಧ ಭಂಢಾರವಿದೆ, ತುಳು ಸಾಹಿತ್ಯದ ಒಳತಿರುಳನ್ನು ಅರಿತರೇ ತುಳು ಭಾಷೆಯ ಸೊಗಡಿನ ಅನುಭವವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮೋದ ಕೆ.ಸುವರ್ಣ ಅವರ ಮಗಳು ಡಾ.ಕ್ಷಮಾ ಶಶಿಧರ್ ಅವರು ತಮ್ಮ ತಾಯಿಯನ್ನು ಸ್ಮರಿಸುತ್ತಾ, ಅವರು ಬರೆದ 4 ಪುಸ್ತಕಗಳೊಂದಿಗೆ, ತಮ್ಮ ಸಂಗ್ರಹದಲ್ಲಿದ್ದ ೭೫ ಪುಸ್ತಕವನ್ನು ಸಂಸ್ಥೆಯ ಗ್ರಂಥಾಲಯಕ್ಕೆ ಹಸ್ತಾಂತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಪ್ರಾಂಶುಪಾಲ ಶರತ್ ಆಳ್ವ ಅವರು ವಹಿಸಿದ್ದರು. ವಿದ್ಯಾರ್ಥಿಗಳಾದ ಕು.ನೈಮಿಷಾ ಶೆಟ್ಟಿ ಪ್ರಾರ್ಥಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಗೆ ತುಳು ಭಾಷಣ ಸ್ಪರ್ಧೆ
ಹಮ್ಮಿಕೊಳ್ಳಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Vry nice..thank u Udupi times