ಬೇಡಿಕೆ ಈಡೇರಿಸದಿದ್ದರೆ ಮೇ ಯಲ್ಲಿ ಬಾರ್ ‘ಬಂದ್’
ಉಡುಪಿ: ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಬೇಡಿಕೆ
ಗಳನ್ನು ರಾಜ್ಯ ಸರ್ಕಾರ ಶೀಘ್ರ ಈಡೇರಿಸದಿದ್ದರೆ ಮೇ ನಲ್ಲಿ ರಾಜ್ಯದಾದ್ಯಂತ ಮದ್ಯ ಮಾರಾಟ ಬಂದ್ ಮಾಡಲು ರಾಜ್ಯ ಮದ್ಯ ಮಾರಾಟಗಾರರ ಸಮ್ಮೇಳನದಲ್ಲಿ ತೀರ್ಮಾನ.
ನಗರದ ಶಾರದಾ ಇಂಟರ್ ನ್ಯಾಶನಲ್ ಹೋಟೆಲ್ ಆವರಣದಲ್ಲಿ ಶುಕ್ರವಾರ ನಡೆದ ರಾಜ್ಯ ಮದ್ಯ ಮಾರಾಟಗಾರರ ಸಮ್ಮೇಳನದಲ್ಲಿ ನಿರ್ಧಾರ ಮಾಡಲಾಗಿದೆ.
ಮುಖ್ಯಮಂತ್ರಿಗಳು ಶೀಘ್ರ ಸಭೆ ಕರೆದು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಬೃಹತ್ ಜಾಥಾ, ಏಪ್ರಿಲ್‌ನಲ್ಲಿ ಪರವಾನಗಿ ಚಳವಳಿ, ಮೇನಲ್ಲಿ ಮದ್ಯ ಮಾರಾಟ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಅಸೋಸಿಯೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ತಿಳಿಸಿದರು.
ಹಿಂದೆ, ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆದು ಗ್ರಾಮಾಂತರ ಪ್ರದೇಶದಲ್ಲಿ 20 ಕೊಠಡಿ ಹಾಗೂ ನಗರದಲ್ಲಿ 30 ಕೊಠಡಿ ಹೊಂದಿದ್ದರೆ ಸಿಎಲ್–7 ಸನ್ನದು ನೀಡಲಾಗುತ್ತಿತ್ತು. 2018ರ ಬಳಿಕ ಗ್ರಾಮಾಂತರ ಭಾಗದಲ್ಲಿ 10 ಹಾಗೂ ನಗರದಲ್ಲಿ 15 ಕೊಠಡಿಗಳಿದ್ದರೂ ಸನ್ನದು ಮಂಜೂರು ಮಾಡಲಾಗುತ್ತಿದೆ. ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಸಿಎಲ್–7 ಸನ್ನದಿಗೆ ಸಂಬಂಧಿಸಿ ಕೊಠಡಿಗಳನ್ನು ಕಡಿಮೆಗೊಳಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
2018ರಿಂದ ಮಂಜೂರಾಗಿರುವ ಹೊಸ ಸಿಎಲ್–4, ಸಿಎಲ್–7 ಸನ್ನದುಗಳನ್ನು ನೀಡುವಾಗ ಕಾನೂನುಗಳು ಕಟ್ಟುನಿಟ್ಟಾಗಿ ಪಾಲನೆಯಾಗಿಲ್ಲ. ಈ ಅವಧಿಯ ಸನ್ನದುಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕು. ನ್ಯೂನತೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಎಂಎಸ್‌ಐಎಲ್ ಅಂಗಡಿಗಳಿಗೆ ಏಕರೂಪ ಸನ್ನದು ಶುಲ್ಕ ವಿಧಿಸು
ತ್ತಿದ್ದು, ಅದರಂತೆ ಎಲ್ಲ ವರ್ಗದ ಸನ್ನದುದಾರರಿಗೆ ಏಕರೂಪದ ಸನ್ನದು ಶುಲ್ಕ ವಿಧಿಸಬೇಕು. ಮದ್ಯ ಮತ್ತು ಬಿಯರ್ ಖರೀದಿಯ ಮೌಲ್ಯದ ಮೇಲೆ ಶುಲ್ಕ ವಿಧಿಸಬೇಕು. ಇದರಿಂದ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ ಎಂದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಉದ್ಯಮವನ್ನು ನಡೆಸುವುದೇ ಕಷ್ಟವಾಗಿದೆ. ಮುಂಬರುವ ಬಜೆಟ್‍ನಲ್ಲಿ ರಾಜ್ಯ ಸರ್ಕಾರ ಮದ್ಯ ವರ್ತಕರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಮದ್ಯ ವರ್ತಕ ಸಂಘ ಎಚ್ಚರಿಸಿದೆ.
ನಗರದಲ್ಲಿ ರಾಜ್ಯ ಮದ್ಯ ವರ್ತಕ ಸಂಘ ಸದಸ್ಯರು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ. ಒಂದು ವೇಳೆ ಸರಕಾರ ಇದಕ್ಕೂ ಬಗ್ಗದಿದ್ದರೆ ರಾಜ್ಯಾದ್ಯಂತ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಮಿಲಿಟರಿ ಕ್ಯಾಂಟೀನ್ ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಡಾಬಾ ಮತ್ತು ಗೂಡಂಗಡಿಗಳಲ್ಲಿ ಮದ್ಯ ಮಾರಾಟ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ವೈನ್ ಮರ್ಚಂಟ್ ಸದಸ್ಯರು ಸಲಹೆ ನೀಡಿದ್ದಾರೆ.
ಅಸೋಸಿಯೇಷನ್‌ನ ರಾಜ್ಯ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಮೈಸೂರು ಮಾತನಾಡಿ, ‘ಅಬಕಾರಿ ಇಲಾಖೆಯ ಅಧಿಕಾರಿಗಳ ದಬ್ಬಾಳಿಕೆ, ಲಂಚದ ಬೇಡಿಕೆಯಿಂದ ಉದ್ಯಮ ನಡೆಸುವುದು ಕಷ್ಟವಾಗಿದೆ. ಸಿಎಲ್– 7 ಪರವಾನಗಿಗೆ ₹50 ರಿಂದ ₹60 ಲಕ್ಷ ಲಂಚ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಮದ್ಯದಂಗಡಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.
ಅಸೋಸಿಯೇಷನ್ ಕೋಶಾಧಿಕಾರಿ ಟಿ.ಎಂ.ಮೆಹರ್‌ವಾಡೆ, ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗ್ಡೆ, ಜಿ. ರಾಮುಲು ಬಳ್ಳಾರಿ, ರಮೇಶ್ ಶಾಲಗಾರ ಬೆಳಗಾವಿ, ಯೋಗೀಶ್ ಬೆಂಗಳೂರು, ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
‘ನಕಲಿ ಮದ್ಯ ಮಾರಾಟಕ್ಕೆ ತಡೆವೊಡ್ಡಿ’
‘ಮಿಲಿಟರಿ ಕ್ಯಾಂಟಿನ್ ಸ್ಟೋರ್, ಸೀಬರ್ಡ್, ಸ್ಟೇ ಹೋಂ ಹೆಸರಿನಲ್ಲಿ ನಕಲಿ ಮದ್ಯ ಮಾರಾಟ ನಡೆಯುತ್ತಿದ್ದು, ಕಡಿವಾಣ ಹಾಕಬೇಕು. ಮದ್ಯ, ಬಿಯರ್ ತಯಾರಿಕಾ ಸಂಸ್ಥೆಗಳು ಸ್ಕೀಮ್‌ನಲ್ಲಿ ನೀಡುವ ಮದ್ಯ, ಬಿಯರ್‌ಗೆ ನಿರ್ಬಂಧ ಹೇರಬೇಕು. ಗ್ರಾಮೀಣ ಭಾಗದ ಗೂಡಂಗಡಿ, ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡದಂತೆ ಕ್ರಮ ವಹಿಸಬೇಕು. ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಅನಗತ್ಯವಾಗಿ ಮದ್ಯದಂಗಡಿಗಳನ್ನು ಬಂದ್ ಮಾಡುವುದನ್ನು ನಿಲ್ಲಿಸಬೇಕು’ ಎಂದು ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಒತ್ತಾಯಿಸಿದರು.