ಭಾರಿ ಮೊತ್ತದ ಮದ್ಯದ ಬಿಲ್‌, ಬಾರ್ ಮಾಲೀಕನಿಗೆ ಶುರುವಾಯ್ತು ಸಂಕಷ್ಟ..!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಭಾರಿ ಮೊತ್ತದ ಮದ್ಯ ಖರೀದಿಸಿದ ಬಿಲ್ ರಹಸ್ಯವೀಗ ಬಯಲಾಗಿದೆ. ಸತತ 40 ದಿನಗಳ ಬಳಿಕ ವ್ಯಾಪಾರ ಆರಂಭಿಸಿದ್ದ ಮದ್ಯದಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಪಾಳೆ ಹಚ್ಚಿ ಮದ್ಯ ಖರೀದಿ ಮಾಡಿದ್ದರು. ಅದರಲ್ಲಿ 52,800 ರೂ.ಗಳ ಒಂದೇ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
 
ಬೆಂಗಳೂರಿನ ವನಿಲಾ ಸ್ಪಿರಿಟ್‌ ಝೋನ್ ಎಂಬ ಮದ್ಯದ ಅಂಗಡಿ ಹೆಸರಿನಲ್ಲಿ ಬಿಲ್ ತಯಾರಿಸಲಾಗಿತ್ತು.ಒಟ್ಟು 17 ಬಗೆಯ 128 ಬಾಟಲಿ ಮದ್ಯ ಖರೀದಿಸಿದ್ದ ಗ್ರಾಹಕರು 58,841 ರೂಪಾಯಿಗಳನ್ನು ಒಂದೇ ಎಟಿಎಂ ಕಾರ್ಡ್‌ನಲ್ಲಿ ಸ್ವೈಪ್ ಮಾಡಿದ್ದರು. ಸ್ವೈಪ್ ಮಾಡಿದ್ದ ರಸೀದಿಯಲ್ಲಿನ ಮೊತ್ತವು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದು ಸಹಜವಾಗಿಯೆ ಅಬಕಾರಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡಕ್ಕೆ ಕಾರಣವಾಗಿತ್ತು.

ಒಬ್ಬ ವ್ಯಕ್ತಿಗೆ ಇಷ್ಟೊಂದು ಮದ್ಯ ಮಾರಾಟ ಹೇಗೆ?: ಬೆಂಗಳೂರಿನಲ್ಲಿ ಒಬ್ಬರಿಗೆ ಒಂದು ದಿನಕ್ಕೆ 2.6 ಲೀಟರ್ ಭಾರತೀಯ ತಯಾರಿಕಾ ಮದ್ಯ ಅಥವಾ 18 ಲೀಟರ್‌ ಬಿಯರ್‌ನ್ನು ಮಾರಾಟ ಮಾಡಲು ಅನುಮತಿ ಕೊಡಲಾಗಿತ್ತು. ಆದರೆ ನಿನ್ನೆ ವನಿಲಾ ಸ್ಪಿರಿಟ್‌ ಝೋನ್‌ನಲ್ಲಿ ಒಬ್ಬ ವ್ಯಕ್ತಿಗೆ 13.5 ಲೀಟರ್‌ ಭಾರತೀಯ ತಯಾರಿಕಾ ಮದ್ಯ ಹಾಗೂ 35 ಲೀಟರ್‌ ಬಿಯರ್‌ನ್ನು ಜೊತೆಯಾಗಿ ಮಾರಾಟ ಮಾಡಲಾಗಿತ್ತು. ಇದು ಅಬಕಾರಿ ಇಲಾಖೆ ಆದೇಶಕ್ಕೆ ವಿರುದ್ಧವಾಗಿತ್ತು.

ತನಿಖೆ ನಡೆಸಿದ ಅಬಕಾರಿ ಇಲಾಖೆ: ಇದೀಗ ನಿಯಮ ಮೀರಿ ಮದ್ಯ ಮಾರಾಟ, ಖರೀದಿ ಮಾಡಿದ್ದಕ್ಕೆ ಅಬಕಾರಿ ಇಲಾಖೆ ಮಾರಾಟಗಾರ ಹಾಗೂ ಖರೀದಿದಾರ ಇಬ್ಬರ ಮೇಲೂ ಪ್ರಕರಣ ದಾಖಲಿಸಿದೆ.ಮಿತಿ ಮೀರಿ ಮದ್ಯ ಖರೀದಿ ಹಾಗೂ ಮಾರಾಟದ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮದ್ಯದ ಅಂಗಡಿಯವರನ್ನು ಪ್ರಶ್ನೆ ಮಾಡಲಾಗಿದ್ದು, ನಮ್ಮ ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಅಬಕಾರಿ ಡಿಸಿ ಗಿರೀಶ್ ಮಾಹಿತಿ ಕೊಟ್ಟಿದ್ದಾರೆ.

ಬಯಲಾಯ್ತು ಭಾರಿ ಬಿಲ್ ರಹಸ್ಯ: ಇದೀಗ ಪ್ರಕರಣ ತಿರುವು ಪಡೆದುಕೊಂಡಿದ್ದು, ಮಂದ್ಯದಂಗಡಿಯ ಮ್ಯಾನೇಜರ್ ಸುರೇಶ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ನಿನ್ನೆ 8 ಜನರು ಸಾಮಾಜಿಕ ಅಂತರದಲ್ಲಿ ಸರದಿಯಲ್ಲಿ ನಿಂತಿದ್ದರು. ಆದರೆ ಯಾರ ಬಳಿಯೂ ಹಣ ಇರಲಿಲ್ಲ. ಕಾರ್ಡ್ ಇದೆ, 8 ಜನರ ಹಣವನ್ನೂ ಇದರಲ್ಲೇ ಸ್ವೈಪ್ ಮಾಡಿಕೊಳ್ಳಿ ಅಂತಾ ಒಬ್ಬರು ಹೇಳಿದ್ರು. ಅವರ ಬಳಿ ಹಣ ಇಲ್ಲದ ಕಾರಣ ಕಾರ್ಡ್‌ನಲ್ಲೇ ಹಣ ಪಡೆದಿದ್ದೇವೆ. ಒಬ್ಬರೇ ಅಷ್ಟು ಖರೀದಿ ಮಾಡಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದರಿಂದ ಅವರೆಲ್ಲರಿಗೂ ಸೇರಿಸಿ ಒಂದೇ ಕಾರ್ಡ್ ಸ್ವೈಪ್ ಮಾಡಿದ್ದೇವೆ. ಈಗ ಅಬಕಾರಿ ಇಲಾಖೆಯಿಂದ ನೋಟಿಸ್ ನೀಡಿದ್ದಾರೆ. ದಂಡ ಕಟ್ಟಬೇಕು ಅಂತ ಸೂಚನೆಯನ್ನೂ ನೀಡಿದ್ದಾರೆ.

ನಾವು ಸರ್ಕಾರದ ಯಾವುದೇ ನಿಯಮವನ್ನ ಉಲ್ಲಂಘನೆ ಮಾಡಿಲ್ಲ. ಇದು ಅನಿರೀಕ್ಷಿತವಾಗಿ ಆದ ಘಟನೆ. ಇನ್ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ವೆನಿಲಾ ಸ್ಪಿರಿಟ್ ಝೋನ್‌ನ ಮ್ಯಾನೇಜರ್ ಸುರೇಶ್ ಕುಮಾರ್ ಹೇಳಿದ್ದಾರೆ. ಆದರೆ 5 ಜನರಿಗೆ ಮಾತ್ರ ಅಂಗಡಿ ಒಳಗೆ ಪ್ರವೇಶ ಕೊಡುವಂತೆ ಅಬಕಾರಿ ಇಲಾಖೆ ಹೇಳಿತ್ತು.
 
ಮಂಗಳೂರಿನಲ್ಲೂ ಭಾರಿ ಮೊತ್ತದ ಬಿಲ್‌: ಇನ್ನೂ ಮಂಗಳೂರಿನಲ್ಲಿಯೂ ಇದೇ ರೀತಿ ಭಾರಿ ಮೊತ್ತದ ರಸೀದಿ ಬಯಲಾಗಿತ್ತು. ಮಂಗಳೂರಿನಲ್ಲಿ ಮದ್ಯಪ್ರಿಯರೊಬ್ಬರು ಮೂರು ವಿಧಗಳ ಮದ್ಯ ಖರೀದಿಸಿ 59,952 ರೂಪಾಯಿಗಳ ಬಿಲ್ ಪಾವತಿ ಮಾಡಿದ್ದರು. ಒಂದೂವರೆ ತಿಂಗಳುಗಳ ಬಳಿಕ ಆರಂಭವಾದ ಮದ್ಯದ ವ್ಯಾಪಾರಿಗಳು ಸಖತ್ತಾಗಿಯೆ ವ್ಯಾಪಾರ ಆರಂಭಿಸಿದ್ದಾರೆ. ಇವತ್ತು ಒಂದೇ ದಿನದಲ್ಲಿ ಒಟ್ಟು ಸುಮಾರು 3.9 ಲಕ್ಷ ಲೀಟರ್ ಬೀಯರ್, 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತರು ತಿಳಿಸಿದ್ದಾರೆ. ಒಂದೇ ದಿನಗದಲ್ಲಿ ಮಾರಾಟವಾಗಿರುವ ಒಟ್ಟು 12.4 ಲಕ್ಷ ಲೀಟರ್‌ ಮದ್ಯದ ಮೌಲ್ಯ 45 ಕೋಟಿ ರೂಪಾಯಿಗಳು ಎಂದು ಅಬಕಾರಿ ಇಲಾಖೆ ಆಯುಕ್ತರು ಮಾಹಿತಿ ಕೊಟ್ಟಿರುವ ಮಾಹಿತಿ ಕೊಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!