ಎಲ್‌ಐಸಿ ಷೇರು ಮಾರಾಟ ನಿರ್ಧಾರ,ಜನರಲ್ಲಿ ಸಂದೇಹ ಮೂಡುವಂತೆ ಮಾಡಿದೆ: ಅಣ್ಣಯ್ಯ
ಉಡುಪಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಷೇರು ಮಾರಾಟದ ಪ್ರಸ್ತಾಪವನ್ನು ವಿರೋಧಿಸಿ ವಿಮಾ ನೌಕರರ ಸಂಘದ ಉಡುಪಿ ವಿಭಾಗದ ನೇತೃತ್ವದಲ್ಲಿ ಎಲ್‌ಐಸಿ ನೌಕರರು ಅಜ್ಜರಕಾಡಿನ ಎಲ್‌ಐಸಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಎಲ್‌ಐಸಿಯ ಷೇರು ಮಾರಾಟ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದು ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಭಾಗವಾಗಿದೆ. ಇದನ್ನು ವಿಮಾ ನೌಕರರ ಸಂಘ ಖಂಡಿಸುತ್ತದೆ ಎಂದು ವಿಮಾ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಒಕ್ಕೂಟದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ನೀಲಾವರ ಮಾತನಾಡಿ, ಕೇಂದ್ರ ಬಜೆಟ್‌ನಲ್ಲಿ ಕೈಗೊಂಡಿರುವ ಎಲ್‌ಐಸಿ ಷೇರು ಮಾರಾಟ ಮಾಡುವ ಪ್ರಸ್ತಾಪವು ಖಾಸಗೀಕರಣದ ಮೊದಲ ಹೆಜ್ಜೆ ಆಗಿದೆ ಎಂದು ಆರೋಪಿದರು.
ಎಲ್‌ಐಸಿ ನಷ್ಟದಲ್ಲಿ ಇರಲ್ಲಿಲ್ಲ. ಆರ್ಥಿಕ ದೃಷ್ಟಿಯಿಂದ ನೋಡಿದರೆ ಪ್ರತಿವರ್ಷ ಶೇ.
70ರಷ್ಟು ಪ್ರಗತಿ ಸಾಧಿಸುತ್ತಾ ಬಂದಿದೆ. ಆದರೂ ಸರ್ಕಾರ ಯಾವ ಕಾರಣಕ್ಕಾಗಿ ಈ
ನಿರ್ಧಾರವನ್ನು ಕೈಗೊಂಡಿದೆ ಎಂಬುವುದೇ ಆಶ್ಚರ್ಯವಾಗಿದೆ. ಸರ್ಕಾರದ ಈ ನಿರ್ಧಾರ
ಎಲ್‌ಐಸಿ ಪಾಲಿಸಿದಾರರು ಹಾಗೂ ಜನಸಮಾನ್ಯರಲ್ಲಿ ಎಲ್‌ಐಸಿ ನಷ್ಟದಲ್ಲಿ ಸಾಗುತ್ತಿದೆಯೇ ಎಂಬ ಸಂದೇಹ ಮೂಡುವಂತೆ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಲ್‌ಐಸಿ 28 ಸಾವಿರ ಕೋಟಿ ರೂ. ಜೀವವಿಮಾ ನಿಧಿಯನ್ನು ಹೊಂದಿದೆ. 1956ರಲ್ಲಿ ಸರ್ಕಾರ ಹೂಡಿರುವ 5 ಕೋಟಿ ಬಂಡವಾಳಕ್ಕೆ ಎಲ್‌ಐಸಿ ಈವರೆಗೆ 26,005.38 ಕೋಟಿಯಷ್ಟು ಲಾಭಾಂಶ ನೀಡಿದೆ. ಅಲ್ಲದೆ, ದೇಶದ ಮೂಲಭೂತ ಸೌಕರ್ಯಗಳಲ್ಲಿ ಎಲ್‌ಐಸಿ ಹೂಡಿಕೆ ಮಾಡಿದ್ದು, ಆ ಮೂಲಕ ದೇಶದ ಪ್ರಗತಿಗೆ ತನ್ನದೇ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅಭಿವೃದ್ಧಿ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದೇವಪ್ಪ ನಾಯಕ್, ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಅಧ್ಯಕ್ಷ ಕೆ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್, ಎಸ್‌ಸಿ ಮತ್ತು ಎಸ್‌ಟಿ ವಿಮಾ ನೌಕರರ ಸಂಘದ ಅಧ್ಯಕ್ಷ ಗೋಪಾಲ ನಾಯ್ಕ್, ಮಹಿಳಾ ಉಪಸಮಿತಿ ಅಧ್ಯಕ್ಷೆ ಪದ್ಮರೇಖಾ ಆಚಾರ್ಯ, ವಿಮಾ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಸ್. ಕವಿತಾ, ವಿಮಾ ನೌಕರರ ಸಂಘದ ಮಾಜಿ ಕಾರ್ಯದರ್ಶಿ ಅದಮಾರು ಶ್ರೀಪತಿ ಆಚಾರ್ಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.