ಎಲ್‌ಐಸಿಯ ಜೀವನ ಮಧುರ ಪಾಲಿಸಿ ಹಗರಣ: ಹಣ ಕಬಳಿಸಿದ ಎಲ್‌ಐಸಿ ಮಧ್ಯವರ್ತಿಗಳು
ಉಡುಪಿ : ಎಲ್‌ಐಸಿಯ ಜೀವನ ಮಧುರ ಪಾಲಿಸಿ ಹಗರಣ ಹಿನ್ನೆಲೆ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಲ್ಲಿಸಿದ ದೂರನ್ನು ಪರಿಶೀಲಿಸಿದ ಆಯೋಗವು ಪಾಲಿಸಿದಾರರಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ತೋರಿಬಂದಿರುವುದರಿಂದ ವಿಚಾರಣೆಗಾಗಿ ಸ್ವೀಕರಿಸಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ|ರವೀಂದ್ರನಾಥ್ ಶಾನುಬಾಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗಕ್ಕೆ ಸೇರಿದ 57 ಸಾವಿರಕ್ಕೂ ಹೆಚ್ಚಿನ ಮೈಕ್ರೋ ಇನ್ಸೂರೆನ್ಸ್ ಪಾಲಿಸಿದಾರರು ಕಟ್ಟಿದ ಕೋಟ್ಯಾಂತರ ರೂಪಾಯಿಗಳನ್ನು ಎಲ್‌ಐಸಿಯೇ ನೇಮಿಸಿದ್ದ ಮಧ್ಯವರ್ತಿಗಳು ಕಬಳಿಸಿದ ಹಗರಣವನ್ನು ಇದೀಗ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ವಿಚಾರಣೆಗಾಗಿ ಸ್ವೀಕರಿಸಿದೆ. ಕಳೆದ 3 ವರ್ಷಗಳಿಂದ ಈ ಪ್ರಕರಣದ ಕೂಲಂಕುಶ ತನಿಖೆ ನಡೆಸಿದ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಲ್ಲಿಸಿದ ದೂರನ್ನು ಪರಿಶೀಲಿಸಿದ ಬಳಿಕ ಆಯೋಗವು ಪಾಲಿಸಿದಾರರಿಗೆ ಮೋಸವಾಗಿರುವುದು ತೋರಿಬಂದಿರುವುದರಿಂದ ವಿಚಾರಣೆಗಾಗಿ ಒಪ್ಪಿಕೊಂಡಿದೆ.
ಜೀವ ವಿಮಾ ನಿಗಮವು ಮಾರಟ ಮಾಡಿರುವ ಸುಮಾರು 57800ರಷ್ಟು ಪಾಲಿಸಿಗಳಲ್ಲಿ ಶೇ. 90 ರಷ್ಟು ಪಾಲಿಸಿಗಳು ರದ್ದಾಗಿರುವ ಈ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಳೆದ 2 ವರ್ಷಗಳಿಂದ ಪ್ರತಿಷ್ಠಾನವು ನೀಡಿದ ದೂರಿಗೆ ಜೀವ ವಿಮಾ ನಿಗಮದ ಆಡಳಿತ ಹಾಗೂ ಆರ್ಥಿಕ ಸಚಿವಾಲಯದಿಂದ ಯಾವುದೇ ಸ್ಪಂದನೆ ಬಾರದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಎಲ್‌ಐಸಿ ಪರವಾಗಿ ಪಾಲಿಸಿದಾರರಿಂದ ಹಣ ಸಂಗ್ರಹಿಸಿದ ಅಮಾಯಕ ಅಂಗನವಾಡಿ ಕಾರ್ಯಕರ್ತೆಯರು ಪಾಲಿಸಿದಾರರ ಆಕ್ರೋಶಕ್ಕೆ ಬಲಿಗಾಗಿದ್ದರು. ಆಯಾಗ್ರಾಮಗಳಲ್ಲಿದ್ದ ಪಾಲಿಸಿದಾರರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂಪಾಯಿಗಳ ಪ್ರಿಮಿಯಂ ಹಣವನ್ನು ಎಲ್‌ಐಸಿ ನೇಮಿಸಿದ್ದ ಪ್ರತಿನಿಧಿಗಳಿಗೆ ಹಸ್ತಾರಿಸಿ ಎಲ್ಲವನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದ ಅಂಗನವಾಡಿ ಕಾರ್ಯಕರ್ತೆಯರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.
ಈ ಹಗರಣದಿಂದ ಕಷ್ಟ ನಷ್ಟಕ್ಕೊಳಗಾಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಷ್ಠಾನವು ನೀಡಿದ ಪತ್ರಕ್ಕೆ ವಿಮಾ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಂದ ಹಾಗೂ ಆರ್ಥಿಕ ಸಚಿವಾಲಯದಿಂದ ಸೂಕ್ತ ಸ್ಪಂದನೆ ದೊರೆಯದಿದ್ದುದ್ದರಿಂದ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ನೀಡಿದ ಪ್ರಾತಿನಿಧಿಕ ದಾವೆಯನ್ನು ಇದೀಗ ಆಯೋಗವು ವಿಚಾರಣೆಗಾಗಿ ಸ್ವೀಕರಿಸಿದೆ. ಪಾಲಿಸಿದಾರರು ಕಟ್ಟಿದ ಪ್ರೀಮಿಯಂ ಹಣವನ್ನು ಬಡ್ಡಿ ಸಹಿತ ಹಿಂದಿರುಗಿಸುವಂತೆ ಪ್ರತಿಷ್ಠಾನವು ಆಯೋಗವನ್ನು ಡಾ|ರವೀಂದ್ರನಾಥ್ ಶಾನುಬಾಗ್ ವಿನಂತಿಸಿದ್ದಾರೆ.